ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಸಂಜೆಯ ವೇಳೆಗೆ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗುತ್ತಿದ್ದು, ಭಾನುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಮನೆಗಳಿಗೆ ಮರ ಬಿದ್ದು ಲಕ್ಷಾಂತರ ರೂ. ಹಾನಿಯಾಗಿದೆ.
ದುರ್ಗಾ ಗ್ರಾಮದ ಮಾಂಜ ಎಂಬಲ್ಲಿನ ಗಂಗಾಧರ ಕೋಟ್ಯಾನ್ ರವರ ಮನೆಗೆ ಭಾಗಶಃ ಹಾನಿಯಾಗಿದ್ದು, ಕೋಳಿ ಫಾರ್ಮ್ ಬಿದ್ದು ಅಂದಾಜು 4000 ಕೋಳಿ ಮರಿಗಳು ಸಾವನ್ನಪ್ಪಿವೆ ಮತ್ತು 50 ಅಡಿಕೆ ಮರಗಳು ನೆಲಕ್ಕುರುಳಿದ್ದು ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ.
ಮಿಯಾರು ಗ್ರಾಮದ ಶಾಲಾ ಬಳಿ ನಿವಾಸಿ ಗಫೂರ್ ಶೇಖ್ ಸಾಬ್ ಸಾಹೇಬ್ ರವರ ವಾಸದ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದ್ದು, ರೂ. 40,000 ನಷ್ಟ ಸಂಭವಿಸಿದೆ. ಹಸನ್ ಬಿನ್ ಶೇಖ್ ಸಾಬ್ ಸಾಹೇಬ್ ರವರ ವಾಸದ ಮನೆಗೆ ಗಾಳಿ ಮಳೆಗೆ ರೂ. 30000 ನಷ್ಟವಾಗಿದೆ. ನೆಲ್ಲುಗುಡ್ಡೆ ಸುಶೀಲ ಹೆಗ್ಡೆ ರವರ ಮನೆಯ ಸಿಮೆಂಟ್ ಒಡೆದು ರೂ. 20000 ನಷ್ಟ ಹಾಗೂ ನಲ್ಲೂರು ಗ್ರಾಮದ ಬಿಚ್ಚನ ಬೆಟ್ಟು ಎಂಬಲ್ಲಿ ಗೀತಾ ರವರ ವಾಸದ ಮನೆ ಗಾಳಿ ಮಳೆಯಿಂದ ರೂ. 30000 ನಷ್ಟ ಸಂಭವಿಸಿದೆ.