ಕಾರ್ಕಳ, ಆ. 26: ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.13 ಕೋ.ರೂ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಮುಗಿದರೂ ಜನರಿಗೆ ಕೊಳಚೆ ನೀರಿನಿಂದ ಮುಕ್ತಿ ಸಿಕ್ಕಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಸದಸ್ಯ ಅಶ್ಪಕ್ ಅಹಮದ್ ಕಾರ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಆ. 25 ರಂದು ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು,13 ಕೋಟಿ ಒಳಚರಂಡಿ ಕುರಿತು ಶಾಸಕರು ವಿಧಾನಸಭೆಯಲ್ಲಿ ಚರ್ಚಿಸಿದ್ದಾರೆ. ಒಳಚರಂಡಿ ಕಾಮಗಾರಿ ನಿರ್ವಹಿಸಿದ ಕೊಳಚೆ ಮಂಡಳಿಯೇ ಒಳಚರಂಡಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ.
ಇದನ್ನು ಕೊಳಚೆ ಮಂಡಳಿಯೇ ನಿರ್ವಹಣೆ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವ್ಯವಸ್ಥಿತ ಒಳಚರಂಡಿ ಕಾಮಗಾರಿ ಮುಗಿದರೂ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ,ಪುರಸಭೆ ಯಾಕೆ ಕ್ರಮ ವಹಿಸಿಲ್ಲವೆಂದು ಪ್ರಶ್ನಿಸಿದರು. ಇದಕ್ಕೆ ಮಧ್ಯಪ್ರವೇಶಿಸಿದ ಇನ್ನೋರ್ವ ಸದಸ್ಯ ಹರೀಶ್ ಕುಮಾರ್,ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯ ಕೊಳಚೆ ನೀರು ಪುರಸಭೆಗೆ ಲಿಂಕ್ ಮಾಡಿದ ಪರಿಣಾಮ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕೊಳಚೆ ನೀರು ರಸ್ತೆಗೆ ಹರಿದು ಜನರಿಗೆ ಸಮಸ್ಯೆ ಆಗುತ್ತಿದೆ,ಈ ಕುರಿತು ಸಮರ್ಪಕ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಹೊರಗುತ್ತಿಗೆ ನೌಕರರ ಗುತ್ತಿಗೆ ಅವಧಿ ಮುಗಿದರೂ ಮರು ಟೆಂಡರ್ ಕರೆಯದೇ ಅವರನ್ನು ಮುಂದುವರಿಸಲಾಗಿದ್ದು, ಪುರಸಭೆ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಸದಸ್ಯ ಸೋಮನಾಥ ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಉತ್ತರಿಸಿ, ವಾಹನ ಚಾಲಕರ ಸೇವೆ ತುರ್ತು ಅಗತ್ಯತೆ ಹಿನ್ನೆಲೆಯಲ್ಲಿ ಅವರನ್ನು ಮುಂದುವರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಪೌರ ಕಾರ್ಮಿಕರಿಗೆ ವೇತನ ಪಾವತಿ ವಿಳಂಬ ಯಾಕೆ? ಅವರ ಜೀವನ ನಿರ್ವಹಣೆ ಹೇಗೆ?
ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಸ್ವಚ್ಚತಾ ಕಾರ್ಮಿಕರು ಅವರಿಗೆ ವೇತನ ಬಿಡುಗಡೆ ಮಾಡಿಲ್ಲ ಎಂದರೆ ಇದರ ಅರ್ಥವೇನು? ಎಂದು ಶುಭದ್ ಪ್ರಶ್ನಿಸಿದರು.ಪುರಸಭೆ ನೌಕರರ ಒಳಜಗಳ,ಸಮನ್ವಯತೆ ಕೊರತೆಯಿಂದ ಜನರಿಗೆ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗುತ್ತಿದೆ.ಇದಕ್ಕೆ ಯಾರು ಹೊಣೆಗಾರರು ಎಂದವರು ಪ್ರಶ್ನಿಸಿದರು.
ಕಾರ್ಕಳದಲ್ಲಿ ಬೀದಿನಾಯಿಗಳ ಕಾಟ ಮಿತಿಮೀರಿದೆ. ಕ್ರೂರಿ ಬೀದಿ ನಾಯಿಗಳು ಜನರ ಮೇಲೆ ಎರಗಿದ ಉದಾಹರಣೆಗಳಿವೆ ಈ ನಿಟ್ಟಿನಲ್ಲಿ ಎಲ್ಲಾ 23 ವಾರ್ಡ್ ಗಳಲ್ಲಿನ ನಾಯಿಗಳಿಗೆ ಪುರಸಭೆ ವತಿಯಿಂದ ಊಟದ ವ್ಯವಸ್ಥೆ ಮಾಡಬೇಕು ಎಂದು ಅಶ್ಪಕ್ ಒತ್ತಾಯಿಸಿದರು.
ಪುರಸಭಾ ವ್ಯಾಪ್ತಿಯಲ್ಲಿನ ಪ್ರಮುಖ ಜಂಕ್ಷನ್ ಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸಿದ ಪರಿಣಾಮ ಅಪಘಾತಗಳು ಸಂಭವಿಸುತ್ತಿದ್ದು ಪುರಸಭೆ ಕ್ರಮ ವಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಪ್ರಶಾಂತ ಕೋಟ್ಯಾನ್ ಉಪಸ್ಥಿತರಿದ್ದರು.
ಪ್ರತಿಮಾ ರಾಣೆ,ಪ್ರದೀಪ್ ರಾಣೆ, ಶೋಭಾ ದೇವಾಡಿಗ, ಸುಮಾ ಕೇಶವ ಸಮಸ್ಯೆಗಳ ಕುರಿತು ಮಾತನಾಡಿದರು.