ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವನೊಬ್ಬನ ಮೇಲೆ ಕಾರಿನಲ್ಲಿ ಬಂದ ವ್ಯಕ್ತಿಗಳು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಈ ಘಟನೆ ನಿಟ್ಟೆ ಕಾಲೇಜಿನ ಹಿಂಭಾಗದಲ್ಲಿರುವ ವಿಜಯಂತ್ ಎಂಬವರ ಅಂಗಡಿಯ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಉಡುಪಿ ತಾಲೂಕು ಬೊಮ್ಮಾರಬೆಟ್ಟು ಗ್ರಾಮದ ಸಾತ್ವಿಕ್ (20ವ) ಎಂಬ ಯುವಕ ಸೋಮವಾರ ಮಧ್ಯಾಹ್ನ ನಿಟ್ಟೆ ಕಾಲೇಜಿನ ಹಿಂಭಾಗ ನಡೆದುಕೊಂಡು ಹೋಗುತ್ತಿದ್ದಾಗ ಯತೀಶ್ ಮತ್ತು ಹರ್ಷ ಎಂಬವರು ವಿನೋದ್ ಹಾಗೂ ಇನ್ನಿಬ್ಬರ ಜೊತೆ ಕಾರಿನಲ್ಲಿ ಬಂದವರು ಸಾತ್ವಿಕ್ ನನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಯತೀಶ್ ಹಾಕಿ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದು, ವಿನೋದ್ ಕೈಯ್ಯಲ್ಲಿ ಚೂರಿಯನ್ನು ಹಿಡಿದುಕೊಂಡು ಕೊಲ್ಲುವುದಾಗಿ ಬೆದರಿಕೆ ಹಾಕಿ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕಾರಿನಲ್ಲಿ ಬಂದಿದ್ದ ಉಳಿದವರು ಕೂಡ ಹಲ್ಲೆ ನಡೆಸಿದ್ದಾರೆ ಎಂದು ಸಾತ್ವಿಕ್ ದೂರು ನೀಡಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
