ಕಾರ್ಕಳ, ಆ.26: ಕಾರ್ಕಳದ ಕುಂಟಲ್ಪಾಡಿ ಬಳಿ ಸೋಮವಾರ ತಡರಾತ್ರಿ ಬಡ್ಡಿ ವ್ಯಾಪಾರಿ ನವೀನ್ ಪೂಜಾರಿ ಎಂಬವರನ್ನು ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಪ್ರಕರಣ ಆರೋಪಿ ಬೆಳ್ತಂಗಡಿ ತಾಲೂಕಿನ ನಡಾ ಗ್ರಾಮದ ಪರೀಕ್ಷಿತ್ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಾಸಗಿ ಬಸ್ ಚಾಲಕನಾಗಿರುವ ಕೊಲೆ ಆರೋಪಿ ಪರೀಕ್ಷಿತ್ ನವೀನ್ ಪೂಜಾರಿಯ ಸ್ನೇಹಿತನಾಗಿದ್ದು,ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬಳ ವಿಚಾರವಾಗಿ ಉಂಟಾ ಜಗಳ ತಾರಕಕ್ಕೇರಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ನವೀನ್ ಹಾಗೂ ಪರೀಕ್ಷಿತ್ ಇಬ್ಬರು ಸೇರಿ ದೂಪದಕಟ್ಟೆ ಹಾಗೂ ಆನೆಕೆರೆ ಬಾರಿನಲ್ಲಿ ಕಂಠಪೂರ್ತಿ ಮದ್ಯಪಾನ ಮಾಡಿ ಮಹಿಳೆಯೊಬ್ಬಳ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ತಡರಾತ್ರಿ ಬಳಿಕ ಇವರಿಬ್ಬರು ಬೈಕಿನಲ್ಲಿ ಮನೆಗೆ ತೆರಳುವ ಮಾರ್ಗಮಧ್ಯೆ ಜಗಳ ನಡೆದು ವಿಕೋಪಕ್ಕೆ ತೆರಳಿ ಕುಡಿತದ ನಶೆಯಲ್ಲಿದ್ದ ಪರೀಕ್ಷಿತ್ ತನ್ನ ಬಳಿಯಿದ್ದ ಚೂರಿಯಿಂದ ನವೀನ್ ಪೂಜಾರಿ ಗೆ ಇರಿದು ಪರಾರಿಯಾಗಿದ್ದ. ಇತ್ತ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ನವೀನ್ ಪೂಜಾರಿಯನ್ನು ಮತ್ತೋರ್ವ ಬೈಕಿನಲ್ಲಿ ಕೂರಿಸಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದ.ಆದರೆ ಅದು ಸಫಲವಾಗದ ಹಿನ್ನೆಲೆಯಲ್ಲಿ ಆತ ನವೀನ್ ಪೂಜಾರಿಯನ್ನು ಬಿಟ್ಟು ತೆರಳಿದ್ದ. ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ಕಳೆದುಕೊಂಡ ನವೀನ್ ಪೂಜಾರಿ ಮೃತಪಟ್ಟಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಮಂಗಳೂರು ಮೂಲದ ನವೀನ್ ಪೂಜಾರಿಗೆ ಕಾರ್ಕಳದ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದ. ಆತನಿಗೆ ಈ ಹಿಂದೆ ಎರಡು ಮದುವೆಯಾಗಿ ಇಬ್ಬರು ಪತ್ನಿಯರನ್ನು ತೊರೆದು ಮತ್ತೋರ್ವಳ ಜತೆ ಲಿವಿಂಗ್ ರಿಲೇಶನ್’ಶಿಪ್ ನಲ್ಲಿದ್ದ ಎನ್ನಲಾಗಿದೆ. ಮೃತ ನವೀನ್ ಪೂಜಾರಿ ಕಾರ್ಕಳ ಆಸುಪಾಸಿನಲ್ಲಿ ಬಡ್ಡಿಗೆ ಸಾಲ ನೀಡುತ್ತಿದ್ದ. ಬಡ್ಡಿಯ ಹಣದಲ್ಲಿ ಕುಡಿತ,ಮೋಜು ಮಸ್ತಿ ಮಾಡಿಕೊಂಡಿದ್ದ. ಇದೀಗ ಇದೇ ಅವನ ಜೀವಕ್ಕೆ ಮುಳುವಾಗಿದ್ದು ಮಾತ್ರ ದುರಂತ.