ನವದೆಹಲಿ: ಜ್ಯಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಸಂದರ್ಭದಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಮೊದಲ ಸರ್ಕಾರಿ ಆದೇಶವನ್ನು ಹೊರಡಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ರಾಷ್ಟ್ರ ರಾಜಧಾನಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಅವರ ಅಧಿಕೃತ ನಿವಾಸದಲ್ಲಿ ಶೋಧದ ನಂತರ ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಇಡಿ ಬಂಧನ ಮಾಡಿತ್ತು.
ಮದ್ಯ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕೇಜ್ರಿವಾಲ್ ಪಾತ್ರದ ಕುರಿತು ಸಮಗ್ರ ವಿಚಾರಣೆಗಾಗಿ ಅವರನ್ನು ಮಾರ್ಚ್ 28 ರವರೆಗೆ ಜ್ಯಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಲಾಗಿದೆ. ಕೇಜ್ರಿವಾಲ್ ಅವರ ಬಂಧನ ಆದ ಕ್ಷಣದಿಂದ ಪಕ್ಷದ ನಾಯಕರು ಅರವಿಂದ್ ಕೇಜ್ರಿವಾಲ್ ಅವರೇ ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ ಎಂದಿದ್ದರು, ಅಗತ್ಯ ಬಿದ್ದಲ್ಲಿ ಸರ್ಕಾರವನ್ನು ಜೈಲಿನಿಂದಲೇ ನಡೆಸಲಿದ್ದಾರೆ ಎಂದು ತಿಳಿಸಿದ್ದರು.
ಈ ಹೇಳಿಕೆಯ ಬೆನ್ನಲ್ಲೇ ಕೇಜ್ರಿವಾಲ್ ಅವರು ದೆಹಲಿ ಸರ್ಕಾರದ ಮೊದಲ ನಿರ್ದೇಶನವನ್ನು ಹೊರಡಿಸಿದ್ದಾರೆ. ಇದು ಜಲ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜಲ ಸಚಿವೆ ಅತಿಶಿ ಅವರು ಇಂದು ಆದೇಶದ ಕುರಿತು ಪ್ರಕಟಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ನಡುವೆ ಜ್ಯಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಶನಿವಾರ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೋಳಿ ರಜೆಯ ಕಾರಣ ನ್ಯಾಯಾಲಯವು ಮಾ. 27ಕ್ಕೂ ಮೊದಲು ಈ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.



