ನವದೆಹಲಿ: ಕೋಲ್ಕತ್ತಾದ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಭೀಕರ ಹತ್ಯೆ ಖಂಡಿಸಿ ವೈದ್ಯರು ಶನಿವಾರ ದೇಶದಾದ್ಯಂತ ಉಗ್ರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಪ್ರಕರಣದ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಕ್ಷಣವೇ ಮಧ್ಯ ಪ್ರವೇಶ ಮಾಡಬೇಕೆಂದು ಭಾರತೀಯ ವೈದ್ಯಕೀಯ ಸಂಘ(IMA) ಪತ್ರ ಬರೆದಿದೆ.
ಅಲ್ಲದೇ ಆರೋಗ್ಯ ಸಿಬ್ಬಂದಿ ವಿರುದ್ಧದ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಕಡ್ಡಾಯ ಭದ್ರತಾ ಕ್ರಮಗಳ ಮೂಲಕ ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸಲು ಕೇಂದ್ರ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದೆ.
ವೈದ್ಯೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದೇಶಾದ್ಯಂತ ವೈದ್ಯರು ಇಂದು ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ಸೇವೆಗಳನ್ನು ಹೊರತುಪಡಿಸಿ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿತು. ಐಎಂಎ ಪ್ರಧಾನಿಗೆ ಬರೆದ ಪತ್ರದಲ್ಲಿ ಐದು ಬೇಡಿಕೆಗಳನ್ನು ಮುಂದಿಟ್ಟಿದೆ. ವೈದ್ಯರು ವಿಶೇಷವಾಗಿ ಮಹಿಳೆಯರು ವೃತ್ತಿಯ ಸ್ವರೂಪದಿಂದಾಗಿ ಹಿಂಸೆಗೆ ಗುರಿಯಾಗುತ್ತಾರೆ. ಆಸ್ಪತ್ರೆಗಳು ಮತ್ತು ಕ್ಯಾಂಪಸ್‌ಗಳ ಒಳಗೆ ವೈದ್ಯರ ಸುರಕ್ಷತೆಯನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದೆ.
ಕೆಲಸದಲ್ಲಿನ ಪರಿಸ್ಥಿತಿಗಳು ಮತ್ತು ಆಸ್ಪತ್ರೆಯಲ್ಲಿ ವೈದ್ಯರಿಗೆ ಸುರಕ್ಷಿತ ಸ್ಥಳಗಳ ಕೊರತೆಯ ವಿರುದ್ಧ ಐಎಂಎ ದೂರಿದ್ದು, ಸಮಸ್ಯೆ ಪರಿಹರಿಸಲು ಪ್ರಧಾನ ಮಂತ್ರಿಯರು ಮಧ್ಯಪ್ರವೇಶಿಸಬೇಕು ಎಂದು IMA ಮನವಿ ಮಾಡಿದೆ
`