Share this news
ಕುಂದಾಪುರ : ಕೋಡಿ ಸಮುದ್ರ ತೀರದಲ್ಲಿ ಅಂಬರ್ ಗ್ರೀಸ್ ಮಾರಾಟದ ಬಗ್ಗೆ ( ತಿಮಿಂಗಿಲ ವಾಂತಿ) ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಾರುವೇಷದಲ್ಲಿ ಬಂದ ಸಿಐಡಿ ಅಧಿಕಾರಿಗಳನ್ನು ಸ್ಥಳೀಯರು ತಪ್ಪು ಗ್ರಹಿಕೆಯಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಡಿ. 18 ರಂದು ಬುಧವಾರ ಮಧ್ಯಾಹ್ನ ಕುಂದಾಪುರ  ಕೋಡಿಯಲ್ಲಿ ನಡೆದಿದೆ.
ಕೋಡಿಯಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾರುವೇಷದಲ್ಲಿ ಮೂರು ಕಾರಿನಲ್ಲಿ ಬಂದ ಅರಣ್ಯ ಇಲಾಖೆ ಸಿಐಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಕಾರಿಗೆ ತುಂಬುವ ವೇಳೆ ಸ್ಥಳೀಯರ ತಪ್ಪು ಗ್ರಹಿಕೆಯಿಂದ ಅಧಿಕಾರಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುತ್ತಾರೆ. ಅಲ್ಲದೆ ಆ ವೇಳೆ ಸುತ್ತಮುತ್ತಲಿನ ಜನ ಸೇರಿದ್ದರಿಂದ ತಳ್ಳಾಟ ನಡೆದಿರುತ್ತದೆ. ಇದರಿಂದಾಗಿ ಅಧಿಕಾರಿಗಳು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. 
ಸುಮಾರು ಆರು ತಿಂಗಳ ಹಿಂದೆ ಕೋಟ ಮಣೂರಿನಲ್ಲಿ CID ಸೋಗಿನಲ್ಲಿ ದರೋಡೆಕೋರರು ಬಂದು ಮನೆ ದರೋಡೆಗೆ ವಿಫಲ ಪ್ರಯತ್ನ ಮಾಡಿದ್ದರು. CC ಕ್ಯಾಮರಾ ಮೂಲಕ ದರೋಡೆ ಯತ್ನದ ದೃಶ್ಯ ಸೆರೆಯಾಗಿತ್ತು. ಈ ಘಟನೆ ನೆನಪಿಸಿಕೊಂಡ ಜನರು ಇದು ಕೂಡ ಅಂತಹದೆ ಮತ್ತೊಂದು ದರೋಡೆ ಯತ್ನ ಎಂದು ತಪ್ಪು ತಿಳಿದು ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದಿದ್ದರು. ಆದರೆ ಇನ್ನೊಂದು ಮೂಲದ ಪ್ರಕಾರ ಅಂಬರ್ ಗ್ರೀಸ್ ವ್ಯವಹಾರ ಸತ್ಯವಾಗಿದ್ದು ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎನ್ನುವ ಮಾಹಿತಿ ಕೇಳಿ ಬರುತ್ತಿದೆ. 
ತಕ್ಷಣ ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ಟೌನ್ ಎಸ್ಐ ನಂಜ ನಾಯ್ಕ ಹಾಗೂ ಸಿಬ್ಬಂದಿಗಳು ಸಿಐಡಿ ಅಧಿಕಾರಿಗಳನ್ನು ಸ್ಥಳಾಂತರಿಸಿದರು.

 

Leave a Reply

Your email address will not be published. Required fields are marked *