ಕೇರಳ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಇಂದು ಮುಂಜಾನೆ ಭೂಕುಸಿತ ಉಂಟಾಗಿದ್ದು, ಅವಶೇಷಗಳಡಿ ಸಿಲುಕಿ ಮೂವರು ಮಕ್ಕಳು ಸೇರಿ 15 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ತಂಡಗಳು ಪರಿಹಾರ ಕಾರ್ಯ ನಡೆಸುತ್ತಿವೆ.
ಮೆಪ್ಪಾಡಿ ಸಮೀಪದ ಗುಡ್ಡಗಾಡು ಪ್ರದೇಶಗಳಲ್ಲಿ ಮೊದಲು ರಾತ್ರಿ 1 ಗಂಟೆ ವೇಳೆಗೆ ಭೂಮಿ ಕುಸಿದಿದೆ. ನಂತರ ಬೆಳಗಿನ ಜಾವ 4.10ರ ಸುಮಾರಿಗೆ ಕಲ್ಪೆಟ್ಟಾದಲ್ಲಿ ಭೂಕುಸಿತ ಸಂಭವಿಸಿತು. ಅಲ್ಲದೇ, ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳನಲ್ಲೂ ಭೂಕುಸಿತವಾಗಿದೆ. ಇಲ್ಲಿನ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಧಾರಾಕಾರ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ.
ಚೂರಲ್ಮಲಾ ಪಟ್ಟಣದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರೆ, ತೊಂಡರ್ನಾಡ್ ಗ್ರಾಮದಲ್ಲಿ ನೇಪಾಳ ಮೂಲದ ಕುಟುಂಬದ ಒಂದು ವರ್ಷದ ಮಗು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಯನ್ನು ಮುಂಜಾನೆ ತೆರೆದಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ತುರ್ತು ಆರೋಗ್ಯ ಸೇವೆಗಳಿಗಾಗಿ 8086010833 ಮತ್ತು 9656938689 ಸಂಪರ್ಕಿಸಬಹುದು.
ವೈಥಿರಿ, ಕಲ್ಪಟ್ಟಾ, ಮೆಪ್ಪಾಡಿ ಮತ್ತು ಮಾನಂದವಾಡಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳು ಸಿದ್ಧವಾಗಿವೆ ಎಂದು ಅವರು ಹೇಳಿದರು.
ರಾತ್ರಿಯೇ, ಎಲ್ಲಾ ಆರೋಗ್ಯ ಕಾರ್ಯಕರ್ತರು ಸೇವೆಗಾಗಿ ಬಂದಿದ್ದರು. ವಯನಾಡ್ನಲ್ಲಿ ಆರೋಗ್ಯ ಕಾರ್ಯಕರ್ತರ ಹೆಚ್ಚಿನ ತಂಡಗಳನ್ನು ನಿಯೋಜಿಸಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದರು.
`