ಬೆಂಗಳೂರು: ಮಾರ್ಚ್ 3ರಿಂದ ಉಭಯ ಸದನಗಳ ವಿಧಾನಮಂಡಲ ಅಧಿವೇಶನ ನಡೆಸುವುದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮಾರ್ಚ್ 3ರಿಂದ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಅಧಿವೇಶನಗಳು ನಡೆಯಲಿವೆ ಎಂದು ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೇರ ನಗದು ವರ್ಗಾವಣೆ ಬದಲಾಗಿ 5 ಕೆಜಿ ಅಕ್ಕಿ ವಿತರಿಸಲು ನೀಡಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ನಿವೇಶನ ಲಭ್ಯವಿರುವ 61 ವಸತಿ ಶಾಲೆಗಳಿಗೆ ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣದ ಕಾಮಗಾರಿಯನ್ನು ಒಟ್ಟು 1292.50 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ – 2025 ಕ್ಕೆ ಅನುಮೋದನೆ, ಕರ್ನಾಟಕ ಅಧಿಕ ಬಡ್ಡಿ ನಿಷೇಧ (ತಿದ್ದುಪಡಿ) ವಿಧೇಯಕ 2025, ಕರ್ನಾಟಕ ಗಿರಿವಿದಾರರ (ತಿದ್ದುಪಡಿ) ವಿಧೇಯಕ – 2025, ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ, 2025 ಹಾಗೂ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) ನಿಯಮಗಳು (ಸಾಮಾನ್ಯ) (ತಿದ್ದುಪಡಿ) 2024 ಐದು ವಿಧೇಯಕ ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.
