
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ತಂಡಗಳು ಚುರುಕುಗೊಳಿಸಿದ್ದು, ಸ್ಪೋಟದ ಲಿಂಕ್ ಗೆ ಸಂಬಂಧಿಸಿದಂತೆ ಫರಿದಾಬಾದ್ ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಮೂವರು ವೈದ್ಯರನ್ನು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ವಿಶ್ವವಿದ್ಯಾಲಯದ ಕ್ಯಾಂಪಸ್ ತಲುಪಿದ ದೆಹಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು, ಕ್ಯಾಂಪಸ್ನ ಸಿಸಿಟಿವಿ ದೃಶ್ಯಾವಳಿಗಳು, ಫರಿದಾಬಾದ್ನಿಂದ ಬೃಹತ್ ಸ್ಫೋಟಕಗಳ ಸಾಗಣೆ ಮತ್ತು ನಂತರ ಸ್ಥಳೀಯ ಜನರೊಂದಿಗೆ ಮಾತನಾಡಿ, ಮೂವರು ವೈದ್ಯರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದಿದ್ದಾರೆ.ಈ ವೇಳೆ ಬಾಂಬ್ ಸ್ಪೋಟದಲ್ಲಿ ವೈದ್ಯರಾದ ಮುಜಮ್ಮಿಲ್ ಶಕೀಲ್, ಉಮರ್ ಮೊಹಮ್ಮದ್ ಮತ್ತು ಶಹಿನಾ ಶಾಹಿದ್ ಅವರ ನಂಟಿರುವುದು ಕಂಡುಬಂದಿದೆ. ಮುಜಮ್ಮಿಲ್ ಮತ್ತು ಉಮರ್ ಕಾಶ್ಮೀರದವರು ಮತ್ತು ಶಹೀನ್ ಲಖನೌದವರು. ಈ ಮೂವರೂ ಫರಿದಾಬಾದ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಫರಿದಾಬಾದ್ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮುಜಮ್ಮಿಲ್ ಹೆಸರು ಕೇಳಿಬಂದಿತ್ತು. ಮುಜಮ್ಮಿಲ್ ಫರಿದಾಬಾದ್ನಲ್ಲಿ ಬಾಡಿಗೆಗೆ ಪಡೆದಿದ್ದ ಎರಡು ಕೊಠಡಿಗಳಿಂದ ಬಾಂಬ್ ತಯಾರಿಕೆಯಲ್ಲಿ ಬಳಸಲಾದ ಸುಮಾರು 2,900 ಕೆಜಿ ವಸ್ತುಗಳು ಮತ್ತು ಇತರ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್-ಫಲಾಹ್ ವಿಶ್ವವಿದ್ಯಾಲಯದ ಮುಜಮ್ಮಿಲ್ ಸಹೋದ್ಯೋಗಿ ಶಾಹೀನ್ ಶಾಹಿದ್ ಕಾರಿನಿಂದ ರೈಫಲ್, ಶಸಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಾಹಿದ್, ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಾರತ ಶಾಖೆಯ ಮಹಿಳಾ ವಿಭಾಗ ಜಮತ್ ಉಲ್-ಮೊಮಿನಾತ್ ನ ಮುಖ್ಯಸ್ಥರಾಗಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

