ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿದ್ದಾರೆ. ಇದೀಗ ಮುಡಾ ರೀತಿಯಲ್ಲೇ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬದ ವಿರುದ್ಧ ಸುಮಾರು 394 ಪುಟಗಳ ದಾಖಲೆ ಸಮೇತ ಮಾಜಿ ಕರ್ಪೊರೇಟರ್ ಎನ್ ಆರ್ ರಮೇಶ್ ಎನ್ನುವವರು ದೂರು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪುತ್ರರಾದ ಪ್ರಿಯಾಂಕ ಖರ್ಗೆ, ರಾಹುಲ್ ಖರ್ಗೆ, ಅಳಿಯ ರಾಧಾಕೃಷ್ಣ ಹಾಗೂ ಕುಟುಂಬದ ಹೆಸರಲ್ಲಿನ ಇರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಟ್ರಸ್ಟ್ ಗೆ ಅಕ್ರಮವಾಗಿ ಸರ್ಕಾರಿ ಭೂಮಿ ಪರಭಾರೆ ಮಾಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಹಾಗೂ ಶೈಕ್ಷಣಿಕ ಉದ್ದೇಶಕ್ಕೆಂದು ಎರಡೆರಡು ಬಾರಿ ಭೂಮಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
2014ರಲ್ಲಿ ಬಿಟಿಎಂ 4ನೇ ಸ್ಟೇಜ್ನ ಎರಡನೇ ಬ್ಲಾಕ್ನಲ್ಲಿ 2 ಎಕರೆ ಬಿಡಿಎ ವ್ಯಾಪ್ತಿಯ ಸಿಎ ನಿವೇಶನ, 2024ರಲ್ಲಿ ಬಾಗಲೂರು ಬಳಿ 5 ಎಕರೆಯಷ್ಟು ಕೆಐಎಡಿಬಿ ಭೂಮಿಯನ್ನು ಮತ್ತೆ ಇವರ ಒಡೆತನ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಪರಭಾರೆ ಮಾಡಿಕೊಳ್ಳಲಾಗಿದೆ. ಈ ಎರಡೂ ನಿವೇಶನಗಳನ್ನು ಒಂದೇ ಸಂಸ್ಥೆಗೆ ಒಂದೇ ಉದ್ದೇಶಕ್ಕೆ ಈ ಟ್ರಸ್ಟ್ ಪಡೆದುಕೊಂಡಿದೆ. ಈ ಎರಡೂ ನಿವೇಶಗಳ ಪ್ರಸ್ತುತ ಒಟ್ಟು ಮೌಲ್ಯ ಬರೋಬ್ಬರಿ 240 ಕೋಟಿ ರೂ. ಅಧಿಕ ಮೊತ್ತ ಎನ್ನಲಾಗಿದೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಟ್ರಸ್ಟೀಗಳಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪತ್ನಿ ರಾಧಾಬಾಯಿ M. ಖರ್ಗೆ, ಮಕ್ಕಳಾದ ಸಚಿವ ಪ್ರಿಯಾಂಕ್ ಖರ್ಗೆ, ರಾಹುಲ್ ಖರ್ಗೆ ಹಾಗೂ ಅಳಿಯ ರಾಧಾಕೃಷ್ಣ ಅವರನ್ನು ಒಳಗೊಂಡಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್. ಶಿಕ್ಷಣ ವ್ಯವಸ್ಥೆ ಎಂಬ ಹೆಸರಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಸರ್ಕಾರಿ ಸಂಸ್ಥೆಗಳಿಂದ ಕಾನೂನು ಬಾಹಿರವಾಗಿ ಸರ್ಕಾರಿ ಸ್ವತ್ತುಗಳನ್ನು ಅಧಿಕಾರ ಮತ್ತು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಮಂಜೂರು ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ದೂರು ದಾಖಲಾಗಿದೆ.
in