ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಹೊಸ ಉತ್ತುಂಗಕ್ಕೇರಿದ್ದು, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಆತ್ಮಹತ್ಯೆಯೇ ಇದಕ್ಕೆ ಸಾಕ್ಷಿ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಸೋಮವಾರ ಆರೋಪಿಸಿದ್ದಾರೆ.
ಚಂದ್ರಶೇಖರನ್ ಅವರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿದೇರ್ಶಕ ಜೆ ಪದ್ಮನಾಭ, ಅಕೌಂಟ್ ವ್ಯವಸ್ಥಾಪಕ ಪರಶುರಾಂ ದುರ್ಗಣ್ಣನವರ್, ಯೂನಿಯನ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ಶುಚಿಸ್ಮಿತ ಕಾರಣ. ವಾಲ್ಮೀಕಿ ನಿಗಮದ ಅನುದಾನದಲ್ಲಿ 80 ರಿಂದ 85 ಕೋಟಿ ರೂ. ಗಳನ್ನು ನಿಯಮ ಬಾಹಿರವಾಗಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಚಂದ್ರಶೇಖರನ್ ಅವರು ತಮ್ಮ ಡೆತ್ ನೋಟ್‌ನಲ್ಲಿ ನಿಗಮದ ಮೊತ್ತವನ್ನು ವರ್ಗಾಯಿಸಲು ಸಂಬಂಧಿಸಿದ ಸಚಿವರಿಂದ ಮೌಖಿಕ ಆದೇಶವನ್ನು ಸ್ವೀಕರಿಸಿದ್ದಾಗಿ ಮತ್ತು ಸುಮಾರು 87 ಕೋಟಿ ರೂಪಾಯಿ ದುರ್ಬಳಕೆಯಾಗಿರುವುದಾಗಿ ತಿಳಿಸಿದ್ದಾರೆ. ಡೆತ್ ನೋಟ್‌ನಲ್ಲಿ ಮೂವರು ಅಧಿಕಾರಿಗಳಾದ ಜೆಜಿ ಪದ್ಮನಾಭ, ಪರಶುರಾಮ್ ಮತ್ತು ಶುಚಿಸ್ಮಿತ ಅವರ ಹೆಸರನ್ನು ನಮೂದಿಸಲಾಗಿದೆ. ಹೀಗಾಗಿ, ಘಟನೆ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈಗಿನ ಸರ್ಕಾರದಲ್ಲಿ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಆರೋಪಿಸಿದರು.