ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಭಯೋತ್ಪಾದಕರಿಗೆ ಫಂಡಿಂಗ್ ಮಾಡಿದ್ದು ಯಾರು ಎಂಬುದರ ಬಗ್ಗೆ (ಇಡಿ) ಜಾರಿ ನಿರ್ದೇಶನಾಲಯ ತನಿಖೆ ತೀವ್ರಗೊಳಿಸಿದೆ.
ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗುವವರ ಹಣದ ಮೂಲದ ಬಗ್ಗೆ ತನಿಖೆ ಚುರುಕುಗೊಂಡಿದ್ದು, ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರಿಕ್ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಶಾರಿಕ್ ಮಾತ್ರವಲ್ಲದೆ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಇತರ ಶಂಕಿತ ಉಗ್ರರನ್ನೂ ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಿಗೆ, ಅಕ್ರಮ ಹಣ ಸಂದಾಯ ಆಗಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿ ಶಂಕಿತ ಉಗ್ರರ ವಿಚಾರಣೆ ನಡೆಸಿದೆ.
ದೇಶದ ಹಲವೆಡೆ ವಿದ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಶಂಕಿತ ಉಗ್ರರ ಷಡ್ಯಂತ್ರ ಎನ್ಐಎ ತನಿಖೆ ವೇಳೆ ಬಯಲಾಗಿತ್ತು. ಅದರ ಬೆನ್ನಲ್ಲೇ ವಿದೇಶಿ ಹಣದ ಮೂಲದ ಕುರಿತಂತೆ ತನಿಖೆಗೆ ಇಡಿ ಮುಂದಾಗಿದೆ. ಶಂಕಿತ ಉಗ್ರರಿಗೆ ಭಯೋತ್ಪಾದನಗೆ ಹಣದ ಪೂರೈಕೆ, ಫಂಡಿಂಗ್ ಹಿಂದಿನ ಕಾಣದ ಕೈಗಳು ಯಾವುದು ಎಂಬುದನ್ನು ಇಡಿ ತನಿಖೆ ಬಯಲಿಗೆಳೆಯಲಿದೆ.