
ಕಾರ್ಕಳ, ಮಾ.14:ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಕರಾವಳಿ ಭಾಗದ ನಿರ್ಲಕ್ಷ್ಯವನ್ನು ಖಂಡಿಸಿ, ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ಬಜಗೋಳಿಯಲ್ಲಿ ಮುಡಾರು ಗ್ರಾಮ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದರು. ಮೂರು ವರ್ಷಗಳಲ್ಲಿ ನಾಲ್ಕು ಬಜೆಟ್ ಮಂಡಿಸಿದರೂ ಕರಾವಳಿ ಭಾಗಕ್ಕೆ ನಯಾಪೈಸೆಯೂ ಅನುದಾನ ನೀಡಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಕಾರ್ಕಳದಲ್ಲಿ ನಡೆದ ಅಭಿವೃದ್ಧಿ ಪರ್ವಕ್ಕೆ ಈಗಿನ ಸರ್ಕಾರ ಬ್ರೇಕ್ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಬಿಲ್ ಗಗನಕ್ಕೇರಿದೆ, ಆರ್.ಟಿ.ಸಿ ದರ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರಿಗೆ ಆಶ್ರಯ ಮನೆಗಳು ಸಿಗುತ್ತಿಲ್ಲ. ಮರಳು ಸಮಸ್ಯೆಯಿಂದ ಕಟ್ಟಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಗುಲಗಳ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಅಭಿವೃದ್ಧಿ ಕಾರ್ಯಗಳ ಕ್ರೆಡಿಟ್ ಪಡೆಯಲು ನಾಟಕವಾಡುತ್ತಿದ್ದಾರೆ,ಅಲ್ಲದೇ ಕಾರ್ಕಳದ ಪ್ರವಾಸೋದ್ಯಮಕ್ಕೆ ಅಡ್ಡಗಾಲು ಹಾಕಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಜನ ವಿರೋಧಿ ನೀತಿಯನ್ನು ಖಂಡಿಸಿ ನಂದಳಿಕೆ ಗ್ರಾಮ ಪಂಚಾಯತ್ ಹಾಗೂ ಬೋಳ ಗ್ರಾಮ ಪಂಚಾಯತ್ ಜಂಟಿಯಾಗಿ ಕೆದಿಂಜೆಯಲ್ಲಿ ನಡೆಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದ ಬಳಿಕ ಸರ್ಕಾರದ ಆಡಳಿತ ವೈಫಲ್ಯಗಳಿಂದ ಜನಸಾಮಾನ್ಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಂಪುಕಲ್ಲು ಮತ್ತು ಮರಳು ಸಾಗಾಟಕ್ಕೆ ಸರಿಯಾದ ನೀತಿ ಇಲ್ಲದ ಕಾರಣ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ನಿರ್ಮಾಣ ಕ್ಷೇತ್ರ ಕುಂಠಿತಗೊಂಡಿದ್ದು, ದುಡಿಯುವ ವರ್ಗಕ್ಕೆ ಕೆಲಸವಿಲ್ಲದೆ ಜೀವನ ದುಸ್ತರವಾಗಿದೆ ಎಂದರು.
ಸಭೆಯಲ್ಲಿ ಬಿಜೆಪಿಯ ಪ್ರಮುಖರಾದ ಸೂರ್ಯಕಾಂತ್ ಶೆಟ್ಟಿ, ಜಯರಾಮ್ ಸಾಲ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಬೋಳ, ದೇವೇಂದ್ರ ಶೆಟ್ಟಿ, ಪ್ರಸಾದ್ ಶೆಟ್ಟಿ ಕಾಡಿಕಂಬಳ, ನಂದಳಿಕೆ ಗ್ರಾಮ ಸಮಿತಿ ಅಧ್ಯಕ್ಷ ರಘುರಾಮ್ ರಾವ್, ಸರ್ವಜ್ಞ ತಂತ್ರಿ, ಸತೀಶ್ ಅಬ್ರನಡ್ಕ, ಆಶಾ ದೇವೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


.
.
.
.
.
.
.
.
.
.
