ಅಲಹಾಬಾದ್: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ.
ಶಾಹಿ ಈದ್ಗಾ ಮಸೀದಿಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಇದರಿಂದ ಹಿಂದೂಗಳಿಗೆ ದೊಡ್ಡ ಗೆಲವು ಸಿಕ್ಕಂತಾಗಿದೆ. ನ್ಯಾಯಾಧೀಶ ಮಯಾಂಕ್ ಕುಮಾರ್ ಜೈನ್ ನೇತೃತ್ವದ ಪೀಠ ಎಲ್ಲಾ 18 ಮೊಕದಮ್ಮೆಗಳನ್ನು ಅಂಗೀಕರಿಸಿದ್ದು, ಆದೇಶ 7 ನಿಯಮ 11ರ ಅಡಿಯಲ್ಲಿ ಈದ್ಗಾ ಮಸೀದಿ ಪರವಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಇದೇ ವೇಳೆ ಹಿಂದೂ ಕಡೆಯವರ ಎಲ್ಲಾ ಅರ್ಜಿಗಳು ವಿಚಾರಣೆಗೆ ಯೋಗ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಪ್ ಬೋರ್ಡ್ ಮತ್ತು ಶಾಹಿ ಈದ್ಗಾ ಸಮಿತಿ, ಪೂಜಾ ಸ್ಥಳದ ಮಿತಿ ಕಾಯಿದೆ, ವಕ್ಫ್ ಕಾಯಿದೆ ಹಾಗೂ ನಿರ್ದಿಷ್ಟ ಪರಿಹಾರ ಕಾಯಿದೆಯಡಿಯಲ್ಲಿ ಹಿಂದೂಗಳು ಸಲ್ಲಿಕೆ ಮಾಡಿರುವ ಎಲ್ಲಾ 18 ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಕೆ ಮಾಡಿತ್ತು. ಆದರೆ ಇದೀಗ ಹಿಂದೂಗಳ ಪರವಾಗಿ ಆದೇಶ ಬಂದಿದ್ದು, ಮುಂದೆ ಎಲ್ಲಾ 18 ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ. ಆಗಸ್ಟ್ 12ರಂದು ನಡೆಯಲಿದೆ.
1968ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಮಸೀದಿ ಈದ್ಗಾ ಟ್ರಸ್ಟ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ 10.9 ಎಕರೆ ಭೂಮಿಯನ್ನು ಕೃಷ್ಣ ಜನ್ಮಭೂಮಿಗೂ ಮತ್ತು ಇನ್ನುಳಿದ 2.5 ಎಕರೆ ಭೂಮಿಯನ್ನು ಶಾಹಿ ಮಸೀದಿ ಸಮಿತಿಗೆ ನೀಡಲಾಗಿತ್ತು. 1991 ರ ಪೂಜಾ ಸ್ಥಳಗಳ ಕಾಯಿದೆಯನ್ನು ಉಲ್ಲೇಖಿಸಿ ಹಿಂದೂ ಕಡೆಯವರು ನೀಡಿದ ಅರ್ಜಿಗಳನ್ನು ವಜಾಗೊಳಿಸುವಂತೆ ಮುಸ್ಲಿಂ ಕಡೆಯವರು ಒತ್ತಾಯಿಸಿದ್ದರು.
ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕಟ್ರಾ ಕೇಶವದೇವ ದೇವಸ್ಥಾನದ 13.37 ಎಕರೆ ಆವರಣದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಮಸೀದಿಯನ್ನು ಒಡೆದು ಕೃಷ್ಣಜನ್ಮಭೂಮಿ ವ್ಯಾಪ್ತಿಗೆ ಸೇರಿಸಬೇಕು. ಈ ಭೂಮಿ ಶ್ರೀ ಕೃಷ್ಣಜನ್ಮಭೂಮಿಯ ಭಾಗವಾಗಿದೆ ಮತ್ತು ಹಿಂದೂಗಳ ಆರಾಧನೆಯ ಸ್ಥಳವಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಾಲಯದ ಹಲವು ಚಿಹ್ನೆಗಳು ಇವೆ. ಶೇಷನಾಗನ ಚಿತ್ರ ಹಾಗೂ ಕಮಲದ ಚಿತ್ರಗಳಿವೆ. ಇದರ ಸತ್ಯಾಸತ್ಯತೆ ತಿಳಿಯಲು, ಸಮೀಕ್ಷೆ ಅಗತ್ಯವಿದೆ’ ಎಂದು ದಾವೆದಾರ ವಿಷ್ಣುಶಂಕರ ಜೈನ್ ಪ್ರತಿಪಾದಿಸಿದ್ದರು.
`