

ಮಂಗಳೂರು: ಯಾವುದೇ ಕಾರಣ ಇಲ್ಲದೆ ಮಧ್ಯರಾತ್ರಿ ವೇಳೆ ಆರ್‌ಎಸ್‌ಎಸ್ ನಾಯಕರೊಬ್ಬರ ಮನೆಗೆ ಪೊಲೀಸರು ಭೇಟಿ ನೀಡಿ ಫೋಟೊ ತೆಗೆಸಿಕೊಂಡು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣ ಸಂಬAಧ ದಕ್ಷಿಣ ಕನ್ನಡ ಎಸ್‌ಪಿ ಅರುಣ್‌ಗೆ ಕರ್ನಾಟಕ ಹೈಕೋರ್ಟ್ ನೊಟೀಸ್ ನೀಡಿದೆ. ಅಲ್ಲದೆ, ಸೂಕ್ತ ದಾಖಲೆ ಸಲ್ಲಿಸುವಂತೆ ತಾಕೀತು ಮಾಡಿದೆ ಹಾಗೂ ಕಾನೂನು ಹೊರತಾಗಿ ಆರ್‌ಎಸ್‌ಎಸ್ ಮುಖಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಡೆದ ನಂತರ ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಹಿಂಸಾಚಾರ ತಡೆಗೆ ಪೊಲೀಸರು ವಿವಿಧ ಕ್ರಮ ಕೈಗೊಂಡಿದ್ದರು. ಆದರೆ, ಯಾವುದೇ ಪ್ರಕರಣದಲ್ಲಿ ಶಾಮೀಲಾಗಿರದ ಆರ್‌ಎಸ್‌ಎಸ್ ಹಾಗೂ ಹಿಂದೂ ಮುಖಂಡರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಫೋಟೊ ತೆಗೆಸಿದ್ದರು. ಪೊಲೀಸರ ಈ ನಡೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಕರ್ನಾಟಕವು ಪೊಲೀಸ್ ರಾಜ್ಯವಾಗುವತ್ತ ಸಾಗುತ್ತಿದೆಯಾ ಎಂದು ಹಿಂದೂ ನಾಯಕರು ಪ್ರಶ್ನಿಸಿದ್ದರು. ಈ ವಿಚಾರವಾಗಿ ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜೂನ್ 1 ರಂದು ಯು.ಜಿ. ರಾಧಾ ಅವರ ಉಪ್ಪಿನಂಗಡಿ ಮನೆಗೆ ರಾತ್ರಿ ಬಂದಿದ್ದ ಪೊಲೀಸರು ಫೋಟೊ ತೆಗೆದು ಅಪ್‌ಲೋಡ್ ಮಾಡಿದ್ದರು. ನಮಗೆ ಹಿರಿಯ ಅಧಿಕಾರಿಗಳ ಆದೇಶವಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ದಾಖಲೆ ತೋರಿಸಿರಲಿಲ್ಲ.
ವ್ಯಕ್ತಿ ಸ್ವಾತಂತ್ರ‍್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾ ಕಾರಣ ಕಸಿದಿದ್ದಾರೆ ಎಂದು ಯು.ಜಿ. ರಾಧಾ ಹೈಕೋರ್ಟ್ ಮೊರೆ ಹೋಗಿದ್ದರು. ಆರೋಪಿಯ ರೀತಿ ನನ್ನನ್ನು ಪೊಲೀಸರು ನಡೆಸಿಕೊಂಡಿದ್ದು, ಇದರಿಂದ ನನ್ನ ಖಾಸಗಿತನ, ಚಾರಿತ್ರ‍್ಯಕ್ಕೆ ಧಕ್ಕೆಯಾಗಿದೆ. ಈ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 20 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠ, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಗೆ ನೋಟಿಸ್ ನೀಡಿದೆ. ದೂರುದಾರರ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು.







