ಕಾರ್ಕಳ : NH169 (ಮಂಗಳೂರಿನಿಂದ ಸಾಣೂರಿನವರೆಗೆ) ಕಾಮಗಾರಿ ನಿರ್ವಹಿಸುವ ವೇಳೆ DBL ಕಂಪನಿಯ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸ್ಥಳೀಯರು ಕಾಮಗಾರಿಯ ಲೋಪದೋಷಗಳ ಬಗ್ಗೆ ತಿಳಿಸಿದಾಗ ಅವರು ದುರಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಸಾಣೂರಿನ ಬ್ರಿಜೇಶ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಅಲ್ಲದೆ ನನ್ನ ಕೃಷಿ ಭೂಮಿ ಇರುವ ತೆಂಕ ಮಿಜಾರ್ ಗ್ರಾಮದಲ್ಲಿ NH ಕಾಮಗಾರಿ ನಡೆಸುತ್ತಿರುವ ವೇಳೆ ಹಲವಾರು ಕಡೆ ನೀರಿನ ಪೈಪ್ ಒಡೆದು ಜಮೀನಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳೆಗಳು ಹಾನಿಗೊಳಗಾಗುತ್ತಿವೆ. ಜೊತೆಗೆ DBL ಸಿಬ್ಬಂದಿ ಕೃಷಿ ಭೂಮಿಗೆ ತ್ಯಾಜ್ಯ / ಅವಶೇಷಗಳನ್ನು ಎಸೆದು ಕೃಷಿಯನ್ನು ಹಾಳುಗೆಡವುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಸಮಸ್ಯೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದಾಗ, ಪೈಪ್ ದುರಸ್ತಿ ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, DBL ಸಿಬ್ಬಂದಿ ಮತ್ತು ಮೇಲ್ವಿಚಾರಕರಾದ ರಾಘವ ಮತ್ತು ತಿವಾರಿ ಎಂಬವರು ದುರಹಂಕಾರವನ್ನು ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ಕೃಷಿಕರ ಬಗ್ಗೆ ತಾತ್ಸಾರ ಭಾವನೆ ರಸ್ತೆ ನಿರ್ಮಾಣ ಸಂಸ್ಥೆಯ ಸಿಬ್ಬಂದಿಯಲ್ಲಿಯೂ ಕಂಡುಬರುತ್ತಿದೆ. ಈಗಾಗಲೇ ಈ ಬಗ್ಗೆ ಯೋಜನಾ ನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ.ಆದ್ದರಿಂದ ಆದಷ್ಟು ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಬೇಂದು ವಿನಂತಿಸಿದ್ದಾರೆ.