
ಕಾರ್ಕಳ, ಡಿ.18: ಕಳೆದ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ಮಹಿಳಾ ಮತದಾರರನ್ನು ಮರಳು ಮಾಡಿ ಮತ ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಜಾರಿಗೊಳಿಸಿದ ಮಹಿಳೆಯರ ಪರವಾದ ಗ್ಯಾರಂಟಿ ಯೋಜನೆಗಳು ಗಂಡಸರ ಜೇಬಿಗೆ ಕೈ ಹಾಕಿ ಹೆಂಗಸರಿಗೆ ನೀಡಿದ ಕುತಂತ್ರ ಈಗ ಜಗಜಾಹೀರಾಗಿದೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಪ್ರತಿ ತಿಂಗಳು ರೂ. 2ಸಾವಿರ ಹಣ ನೀಡುವ ಖಾತ್ರಿ ನೀಡಿದ ಸರಕಾರ ಪ್ರಾರಂಭದ ದಿನದಿಂದಲೂ ಎಡವುತ್ತಾ ಸಾಗುತಿದ್ದು ಯಾವುದೇ ಚುನಾವಣೆ ಅಥವಾ ಉಪಚುಣಾವಣೆ ಬಂದಾಗ ಮಹಿಳೆಯರ ಖಾತೆಗೆ ಮಾತ್ರ ಹಣ ನೀಡಿ ಮತ್ತೆ ಮತ್ತೆ ತನ್ನ ಹುಳುಕನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿತ್ತಿರುವುದು ನಾಚಿಕೆಗೇಡು. ತಾಂತ್ರಿಕ ಕಾರಣಗಳನ್ನು ನೀಡಿ ಹಲವು ತಿಂಗಳಿನಿಂದ ಫಲಾನುಭಾವಿಗಳಿಗೆ ಸತಾಯಿಸುತ್ತಿರುವ ಸರಕಾರ ಇನ್ನೂ ಒಂದು ಹೆಜ್ಜೆ ಹೋಗಿ ಬೆಳಗಾವಿ ಅಧಿವೇಶನದ ಸದನದಲ್ಲಿ ಈ ಬಗ್ಗೆ ತಪ್ಪು ಮಾಹಿತಿ ನೀಡಿ ಜನತೆಗೆ ಪಂಗನಾಮ ಹಾಕಲು ಸಂಬಂಧಪಟ್ಟ ಇಲಾಖೆ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಯತ್ನಿಸಿರುವುದು ಇಡೀ ಸರಕಾರದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಂತಿದೆ.
ಪದೇ ಪದೇ ನುಡಿದಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಬಡಾಯಿಕೊಚ್ಚಿಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರ ಯಾವುದೇ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ರಾಜ್ಯದ ಜನರನ್ನು ಮೂರ್ಖರ ಪಟ್ಟಿಗೆ ಸೇರಿಸುವ ಪ್ರಯತ್ನದಲ್ಲಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಕುರಿತು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಒಬ್ಬ ಮಹಿಳೆಯಾಗಿದ್ದರೂ ಕೂಡ ಮಹಿಳೆಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ಪದೇಪದೇ ಸುಳ್ಳು ಹೇಳಿಕೆ ನೀಡುವ ಮೂಲಕ ಬಡ ಮಹಿಳೆಯರ ಬದುಕಿಗೆ ಕಂಟಕಪ್ರಾಯ ಆಗಿದ್ದಾರೆ. ಇವರುಗಳ ವರ್ತನೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯ ಡಿ ಬಂಗೇರ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
.
.
