ಕಾರ್ಕಳ : ನಮ್ಮ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಭಗವಂತನ ಕೃಪೆ ಸಿಗುತ್ತದೆ,ಹಾಗಾಗಿ ನಮ್ಮಿಂದಾದ ಸೇವೆಯನ್ನು ಭಗವಂತನ ಹಾಗೂ ಸಮಾಜಕ್ಕೆ ನೀಡಬೇಕು. ಮಹೇಶ್ ಶೆಟ್ಟಿಯವರು ತನಗಾಗಿ ಬದುಕದೇ ಇಡೀ ಹಿಂದೂ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸೇವೆಯನ್ನು ನೀಡುತ್ತಿದ್ದಾರೆ. ಅದರಂತೆ ನಾವೆಲ್ಲರೂ ಕೂಡ ಸಮಾಜದ ಋಣವನ್ನು ತೀರಿಸುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿ ಕಳೆಯಬೇಕಾಗಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀಸಂಪುಟ ನರಸಿಂಹ ಸ್ವಾಮಿ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಕಾರ್ಕಳದ ಮಂಜುನಾಥ್ ಪೈ ಸಭಾಂಗಣದಲ್ಲಿ ಭಾನುವಾರ ನಡೆದ ತೆಳ್ಳಾರು ಮಹೇಶ್ ಶೆಟ್ಟಿ ಕುಡುಪುಲಾಜೆಯವರ 50ನೇ ವರ್ಷದ ಜನ್ಮ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿದರು.
ಕಾರ್ಕಳ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಹಿಂದುತ್ವ ಹಾಗೂ ರಾಷ್ಟ್ರೀಯತೆ ವಿಚಾರವನ್ನು ಮತ್ತೆ ನೆನಪು ಮಾಡಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಇದೊಂದು ವ್ಯಕ್ತಿ ಪೂಜೆಯಲ್ಲ ಬದಲಾಗಿ ವ್ಯಕ್ತಿತ್ವದ ಪೂಜೆಯಾಗಿದೆ. ಮಹೇಶ್ ಶೆಟ್ಟಿಯವರು ತಾನು ನಂಬಿದ ವಿಚಾರವನ್ನು ಹಾಗೂ ವೈಚಾರಿಕತೆಯಲ್ಲಿ ಎಂದೂ ರಾಜಿ ಮಾಡದೇ ಇರುವ ವ್ಯಕ್ತಿ. ಸಮಾಜಕ್ಕೆ ಒಳಿತಾಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಕೆಲಸ ಮಾಡಿದವರು. ಹಿಂದುತ್ವಕ್ಕಾಗಿ ಗಟ್ಟಿ ಧ್ವನಿ ಎತ್ತಿದವರು ಎಂದರು.
ಈ ಸಂದರ್ಭದಲ್ಲಿ ತೆಳ್ಳಾರು ಮಹೇಶ್ ಶೆಟ್ಟಿ ಕುಡುಪುಲಾಜೆ ದಂಪತಿಗಳನ್ನು ಅವರ ಅಭಿಮಾನಿಗಳು ಸನ್ಮಾನಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಬೋಳ ಪ್ರಭಾಕರ್ ಕಾಮತ್ ವಹಿಸಿ ಮಾತನಾಡಿ,ಹಿಂದೂ ಧರ್ಮ ಹಾಗೂ ಸಮಾಜಕ್ಕೆ ಮಹೇಶ್ ಶೆಟ್ಟಿಯವರ ಕೊಡುಗೆ ಅಪಾರವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಎಂ.ಆರ್.ಜಿ. ಗ್ರೂಪ್ ಚೇರ್‌ಮ್ಯಾನ್ ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ ಭೋಜ ಶೆಟ್ಟಿ, ಮುಂಬೈ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಜಿ.ಅಮೀನ್, ಮುಂಬೈ ಉದ್ಯಮಿ ಎನ್.ಟಿ ಪೂಜಾರಿ, ಸಹೋದರ ತೆಳ್ಳಾರ್ ಗಿರೀಶ್ ಶೆಟ್ಟಿ ಕುಡುಪುಲಾಜೆ, ಅನಂತಕೃಷ್ಣ ಶೆಣೈ ಮುಂತಾದವರು ಉಪಸ್ಥಿತರಿದ್ದರು. ಸುನಿಲ್ ಕೆ.ಆರ್ ಸ್ವಾಗತಿಸಿ, ಕರುಣಾಕರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ನಿರಂಜನ್ ಜೈನ್ ವಂದಿಸಿದರು.