ಬೆಂಗಳೂರು: ಕಳೆದ ತಿಂಗಳು ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ಶಾಜಿಬ್ ಎಂದುರಾಷ್ಟ್ರೀಯತನಿಖಾ ದಳ ಗುರುತಿಸಿರುವುದಾಗಿ ತಿಳಿದು ಬಂದಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೃತ್ಯದ ಹಿಂದೆ ಶಿವಮೊಗ್ಗ ಐಸಿಸ್ ಮಾಡ್ಯೂಲ್’ ಕೈವಾಡ ಇರುವುದು ಖಚಿತವಾಗಿದೆ. ಮುಸಾಬೀರ್ ಹುಸೇನ್ ಶಾಜಿಬ್ ‘ಮೋಸ್ಟ್‌ವಾಂಟೆಡ್’ ಶಂಕಿತ ಉಗ್ರನಾಗಿದ್ದು, ಮೂರು ವರ್ಷಗಳಿಂದ ಆತನ ಪತ್ತೆಗೆ ಎನ್‌ಐಎ ಹುಡುಕಾಟ ನಡೆಸಿದೆ. ಅಲ್ಲದೇ 2022ರಿಂದ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯಗಳಲ್ಲಿ ತೀರ್ಥಹಳ್ಳಿ ತಾಲೂಕಿನ ಮತ್ತೊಬ್ಬ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಅಬ್ದುಲ್ ಮತೀನ್ ತಾಹ ಜತೆ ಶಾಜಿಬ್ ಪಾತ್ರ ವಹಿಸಿದ್ದಾನೆ.
ಮಾ.1ರಂದು ಕೆಫೆ ವಿಧ್ವಂಸಕ ಕೃತ್ಯದ ಬಾಂಬರ್ ಬೆನ್ನತ್ತಿದ್ದ ಎನ್ಐಎ ಹಾಗೂ ಸಿಸಿಬಿ ಪೊಲೀಸರು, ಕುಂದಲಹಳ್ಳಿಯಿಂದ ಬಳ್ಳಾರಿವರೆಗೆ ಸುಮಾರು 800ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪರಿಶೀಲಿಸಿದ್ದರು. ಆ ದೃಶ್ಯಾವಳಿಗಳಲ್ಲಿದ್ದ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಶಾಜಿಬ್ ಭಾವಚಿತ್ರಕ್ಕೂ ತಾಳೆಯಾಗಿದೆ.
ಶಿವಮೊಗ್ಗ-ಮಂಗಳೂರು ಲಿಂಕ್:
ಇತ್ತೀಚಿನ ವರ್ಷಗಳಲ್ಲಿ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ ಪ್ರಕರಣ, ಮಂಗಳೂರು ಕುಕ್ಕರ್‌ಸ್ಫೋಟ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ತೀರದಲ್ಲಿ ಬಾಂಬ್ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಪೋಟ ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಗಳಿಗೆ ನಂಟಿದೆ. ಅಲ್ಲದೇ ಮಂಗಳೂರು ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗದಲ್ಲಿ ಪತ್ತೆಯಾಗಿದ್ದ ಸ್ಫೋಟಕ ವಸ್ತುಗಳಿಗೂ ಕೆಫೆ ಸ್ಫೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ. ಹೀಗಾಗಿ ಶಿವಮೊಗ್ಗ ಐಸಿಎಸ್ ತಂಡವೇ ಕೆಫೆ ಕೃತ್ಯದಲ್ಲಿ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರಕೇಂದ್ರ ಕಾರಾಗೃಹದಲ್ಲಿರುವ ಮಾಝ್ ಮುನೀರ್ ಅಹ್ಮದ್‌ನನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ.
2021ರಿಂದ ತಲೆಮರೆಸಿಕೊಂಡಿರುವ ಶಂಕಿತರು:
ಐಸಿಸ್ ಸಂಘಟನೆಗೆ ಮಲೆನಾಡಿನಲ್ಲಿ ಮುಸ್ಲಿಂ ಯುವಕರ ನೇಮಕಾತಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಮತೀನ್‌ತಾಹ ಹಾಗೂ ಶಾಜಿಬ್ ಪ್ರಮುಖ ಪಾತ್ರ ವಹಿಸಿದ್ದರು.2021ರ ಜನವರಿಯಲ್ಲಿ ಸದ್ದುಗುಂಟೆಪಾಳ್ಯದಲ್ಲಿ ದಕ್ಷಿಣ ಭಾರತದ ಐಸಿಸ್ ಕಮಾಂಡರ್ ಮೊಯಿದ್ದೀನ್ ಬ್ಲಾಜಾ ತಂಡವನ್ನು ಎನ್‌ಐಎ ಹಾಗೂ ಸಿಸಿಬಿ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದವು. ಅಂದು ತಪ್ಪಿಸಿಕೊಂಡ ಮತೀನ್ ಹಾಗೂ ಶಾಜಿಬ್ ಜೋಡಿ ಮತ್ತೆಂದೂ ಪೊಲೀಸರಿಗೆ ಸಿಗದೇ ಭೀತಿ ಸೃಷ್ಟಿಸಿದೆ. ತೀರ್ಥಹಳ್ಳಿ ತಾಲೂಕಿನ ಮೊಹಮ್ಮದ್ ಶಾರೀಕ್,ಎಂಜಿನಿಯರಿಂಗ್ ಪದವೀಧರ ಅರಾಫತ್ ಅಲಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮಾಝ್ ಮುನೀರ್ ಅಹ್ಮದ್ ಮತ್ತು ಸಾದತ್ ಗೆ ಐಸಿಸ್ ನಂಟಿದೆ ಎನ್ನುವ ಮಾಹಿತಿ ಎನ್ಐಎ ಕಲೆ ಹಾಕಿದೆ.



