ಹೆಬ್ರಿ: ಭಾರೀ ಪ್ರವಾಹವಿದ್ದ ಹೊಳೆಯನ್ನು ದಾಟುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಶನಿವಾರ ಮುಂಜಾನೆ ಪತ್ತೆಯಾಗಿದೆ.
ಮೂಲತಃ ತುಮಕೂರು ಮೂಲದ ಆನಂದ ಎಂಬವರು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆ ಮನೋರಮಾ ಹೆಗ್ಡೆ ಎಂಬವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಕಳೆದ ಹಲವು ದಿನಗಳ ಹಿಂದೆ ಅನ್ಯ ಕಾರ್ಯದ ನಿಮಿತ್ತ ಬ್ರಹ್ಮಾವರಕ್ಕೆ ಹೋಗಿ ಜು.18ರಂದು ಗುರುವಾರ ವಾಪಾಸು ಬಂದಿದ್ದರು. ಆದರೆ ಭಾರೀ ಪ್ರವಾಹದ ಹಿನ್ನಲೆಯಲ್ಲಿ ತಿಂಗಳೆಗೆ ಹೋಗಲಾಗದೇ ಚಿರೋಳಿಯಲ್ಲಿನ ಮನೋರಮಾ ಹೆಗ್ಡೆ ಸಂಬAಧಿಕರ ಮನೆಯಲ್ಲಿ ಊಟ ಮುಗಿಸಿದ ಆನಂದ ಪ್ರವಾಹದ ನಡುವೆಯೂ ಹೊಳೆ ದಾಟಲು ಯತ್ನಿಸಿದ್ದಾರೆ. ಆತನ ಜತೆಗಿದ್ದ ರಾಮಣ್ಣ ಎಂಬವರು ರಕ್ಷಿಸಲು ಯತ್ನಿಸಿದ್ದರೂ ಆನಂದ ಹೊಳೆಯಲ್ಲಿ ಕೊಚ್ಚಿ ಹೋಗಿದ್ದರು.
ಇತ್ತ ಹೆಬ್ರಿ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡ ಕಳೆದ ಎರಡು ದಿನಗಳಿಂದ ಆನಂದ ಅವರನ್ನು ಹುಡುಕಲು ಸಾಕಷ್ಟು ಪ್ರಯತ್ನ ನಡೆಸಿದರೂ ವಿಫಲರಾಗಿದ್ದರು. ಶನಿವಾರ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡದ ಸಹಾಯ ಪಡೆದಿದ್ದು ಕೊನೆಗೂ ಶನಿವಾರ ಮಧ್ಯಾಹ್ನ ಸುಮಾರು 4 ಕಿ.ಮೀ.ನಷ್ಟು ಹುಡುಕಾಟ ನಡೆಸಿ ಆನಂದ ಮೃತದೇಹ ಪತ್ತೆಯಾಗಿದೆ.
ಶೋಧ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಷ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಪ್ರಮುಖ ಅಗ್ನಿ ಶಾಮಕರಾದ ಅಚ್ಚುತ ಕರ್ಕೇರ, ರೂಪೇಶ್, ಹರಿಪ್ರಸಾದ್, ಸುರೇಶ್, ಚಾಲಕರಾದ ಜಯ ಮೂಲ್ಯ, ಮುಜಾಮಿಲ್, ಸಂಜಯ್, ಹಾಗೂ ಅಗ್ನಿ ಶಾಮಕರಾದ ಹಸನ್ ಮುಲ್ತಾನಿ, ನಿತ್ಯಾನಂದ, ರವಿ, ಭೀಮಪ್ಪ ಮುಂತಾದವರು ಪಾಲ್ಗೊಂಡಿದ್ದರು
ಸಂದರ್ಭದಲ್ಲಿ ಹೆಬ್ರಿ ತಾಲೂಕು ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ಠಾಣಾ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಊರವರು ಶೋಧ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.