ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಘಟನೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಇದೊಂದು ರ್ಪೂನಿಯೋಜಿತ ಕೃತ್ಯ ಎಂದು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಆರೋಪ ಮಾಡುತ್ತಿವೆ. ಪ್ರಕರಣಕ್ಕೆ ಸಂಬAಧಿಸಿದ ಎಫ್ ಐ ಆರ್ ನಲ್ಲಿರುವ 74 ಆರೋಪಿಗಳ ಪೈಕಿ ಕೇರಳ ಮೂಲದ ಇಬ್ಬರ ಹೆಸರು ಇದ್ದು, ಎ44 ಯೂಸುಫ್, ಎ61 ನಾಸೀರ್ ಇಬ್ಬರೂ ಕೇರಳದ ಮಲಪ್ಪುರಂ ನಿವಾಸಿಗಳಾಗಿದ್ದು, ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರು ಎಂಬ ಅನುಮಾನ ವ್ಯಕ್ತವಾಗಿದೆ.ಈ ಹಿನ್ನಲೆಯಲ್ಲಿ ನಾಗಮಂಗಲ ಗಲಾಟೆ ಹಿಂದೆ ಕೇರಳ ಮೂಲದವರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ
ಯೂಸುಫ್ ಮತ್ತು ನಾಸೀರ್ ಕೆಲ ದಿನಗಳಿಂದ ನಾಗಮಂಗಲದಲ್ಲಿ ವಾಸವಿದ್ದರು. ಈ ಗಲಭೆ ಹಿಂದೆ ಇವರ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ಮೊದಲೇ ಸಂಚು ರೂಪಿಸಿ ನಾಗಮಂಗಲದಲ್ಲಿ ಗಲಾಟೆಗೆ ಪ್ಲ್ಯಾನ್ ಮಾಡಲಾಗಿತ್ತು ಎಂಬ ಶಂಕೆ ಮೂಡಿದೆ.
ಯೂಸುಫ್ ಮತ್ತು ನಾಸೀರ್ ಇಬ್ಬರೂ ಪಿ ಎಫ್ ಐ ಸದಸ್ಯರು. ನಾಗಮಂಗಲದಲ್ಲಿ ಗಲಭೆ ನಡೆಸಲು ಪೂರ್ವ ತಯಾರಿ ನಡೆದಿದೆ. ಗಲಾಟೆ ನಡೆದ ದಿನ ಮೆಡಿಕಲ್ ಅಂಗಡಿಯಲ್ಲಿ 200 ಮಾಸ್ಕ್ ಖರೀದಿಸಲಾಗಿದೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡ ಇದೆ. ಆದ್ದರಿಂದ ಗಲಭೆ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ವಿಶ್ವ ಹಿಂದೂ ಪರಿಷತ್ ನಾಗಮಂಗಲ ತಾಲೂಕು ಅಧ್ಯಕ್ಷ ಅಜೀತ್ ಪ್ರಸಾದ್ ಆಗ್ರಹಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಗಲಭೆ ವೇಳೆ ಕೇರಳದವರು ಬಂದು ಹೋಗಿಲ್ಲ. ಕೇರಳದವರು ನಾಗಮಂಗಲದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ಅರೆಸ್ಟ್ ಮಾಡಲಾಗಿದೆ. ಗಲಭೆಯ ಸಂಪೂರ್ಣ ತನಿಖೆ ಆಗದೆ ಪಿಎಫ್‌ಐ ಅವರು ಇದ್ದಾರೆ ಎನ್ನಲು ಆಗಲ್ಲ. ಊಹಾಪೋಹಗಳು ಎಲ್ಲ ಬೇಡ. ಇದನ್ನು ಬೆಳೆಸುವುದಕ್ಕಿಂತ ಶಾಂತಿ ಕಾಪಾಡಬೇಕು. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಯಾರಿಂದ ತನಿಖೆ ಮಾಡಿಸಬೇಕೆಂದು ತೀರ್ಮಾನ ಮಾಡಿಸಿದ್ದೇವೆ. ಈ ಗಲಭೆಯ ಬಗ್ಗೆ ಸಂಪೂರ್ಣ ರಿಪೋರ್ಟ್ ಕೊಡಲು ಹೇಳಿದ್ದೇನೆ ಎಂದು ತಿಳಿಸಿದರು.









in 






