ಮಂಡ್ಯ : ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬದ್ರಿಕೊಪ್ಪಲಿನಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಈ ಗಲಭೆ ಕುರಿತಂತೆ ಪೊಲೀಸರು 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬದರಿಕೊಪ್ಪಲದಲ್ಲಿ ಬುಧವಾರ ಸಂಜೆ ಗಣಪತಿ ವಿಸರ್ಜನಾ ಮೆರವಣಿಗೆ ಆರಂಭಗೊಂಡಿತ್ತು. ಡಿಜೆ,ವಾದ್ಯ ಘೋಷದೊಂದಿಗೆ ಆರಂಭಗೊಂಡ ಮೆರವಣಿಗೆ ಮಸೀದಿ ರಸ್ತೆಯ ಮೂಲಕ ಸಾಗುತ್ತಿದ್ದಾಗ ಕೆಲ ಮುಸ್ಲಿಂ ಯುವಕರು ಡಿಜೆ, ತಮಟೆ ಬಾರಿಸುವುದಕ್ಕೆ ಆಕ್ಷೇಪಿಸಿದರು ಎನ್ನಲಾಗಿದೆ. ಈ ವೇಳೆ ಉಭಯ ಸಮುದಾಯಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ನಡೆದಿದೆ.ಇದರಿಂದ ಕೆರಳಿದ ಮುಸ್ಲಿಂ ಯುವಕರ ಗುಂಪು ಏಕಾಎಕಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರ ನಡುವೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ಹಲವಾರು ವಾಹನಗಳು ಹಾಗೂ ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಇದಲ್ಲದೇ ಕೆಲವು ಕಿಡಿಗೇಡಿಗಳು ತಲವಾರು,ರಾಡ್ ಗಳನ್ನು ಹಿಡಿದುಕೊಂಡು ದಾಂಧಲೆ ನಡೆಸಲು ಮುಂದಾದಾಗ ಪೊಲೀಸರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಸೀದಿ ರಸ್ತೆಗೆ ತೆರಳುತ್ತಿದ್ದ ಮೆರವಣಿಗೆಗೆ ತಡೆ
ಬದರಿಕೊಪ್ಪಲಿನಿಂದ ಹೊರಟ ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಿತ್ತು. ಆದರೆ ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗಿದ್ದಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.
ಮಸೀದಿ ಬಳಿಯೇ ಕಲ್ಲು ತೂರಾಟ
ಅನ್ಯಕೋಮಿನ ಯುವಕರ ಕ್ಯಾತೆಗೆ ಕೇರ್ ಮಾಡದ ಗಣೇಶನ ವಿಸರ್ಜನಾ ತಂಡ, ಮೈಸೂರು ರಸ್ತೆಯಲ್ಲಿರುವ ಯಾ ಅಲ್ಲಾ ಮಸೀದಿ ಮತ್ತು ದರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿದೆ. ಡಿಜೆ ಸೌಂಡ್ ಜತೆ ಡೊಳ್ಳು, ತಮಟೆ ಸದ್ದಿನೊಂದಿಗೆ ಪಟಾಕಿ ಸಿಡಿಸುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದೆ. ಇನ್ನೇನು ಮಸೀದಿಯಿಂದ ಸ್ವಲ್ಪ ದೂರ ಇದೆ ಎನ್ನುವಾಗ ಅನ್ಯಕೋಮಿನ ಯುವಕರು ಏಕಾಏಕಿ ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕಟ್ಟಡದ ಮೇಲೆ ನಿಂತುಕೊಂಡು ಸಹ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಘಟನೆಯ ವಿರುದ್ಧ ರೊಚ್ಚಿಗೆದ್ದ ಹಿಂದೂಗಳು ಗಣೇಶ ಮೂರ್ತಿಯನ್ನು ಪೊಲೀಸ್ ಠಾಣೆಯಲ್ಲಿರಿಸಿ ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ,ಎಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸೆಪ್ಟಂಬರ್ 14ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಘಟನೆಯಲ್ಲಿ ದಾಂಧಲೆ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ