ಕಾರ್ಕಳ,ಆ.29: ರಕ್ತದೊತ್ತಡ, ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತಾನು ಏಕಾಂಗಿಯಾಗಿ ವಾಸವಿದ್ದ ಮನೆಯಲ್ಲೇ ಮೃತಪಟ್ಟು ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಹೊಸಮನೆ ಪೆರೆಬೆಟ್ಟು ನಿವಾಸಿ ರಘುರಾಮ(65) ಎಂಬವರು ಮೃತಪಟ್ಟ ವ್ಯಕ್ತಿ. ರಘುರಾಮ ಕಳೆದ ಹಲವು ವರ್ಷಗಳಿಂದ ಬಿಪಿ, ಸಕ್ಕರೆ ಕಾಯಿಲೆ ಹಾಗೂ ಹರ್ನಿಯಾ ಕಾಯಿಲೆಯಿಂದ ಬಳಲುತ್ತಿದ್ದರು.ಇವರು ಕಳೆದ 15 ವರ್ಷಗಳಿಂದ ಪತ್ನಿ ಹಾಗೂ ಮಗನನ್ನು ತೊರೆದು ಬೇರೆ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಆದರೆ ಮನೆಯಲ್ಲಿ ಆರೈಕೆಗೆ ಯಾರೂ ಇಲ್ಲದ ಕಾರಣದಿಂದ ಒಬ್ಬರೇ ಅನಾರೋಗ್ಯದಿಂದ ಹಾಸಿಗೆ ಹಿಡಿದ ಅವರು ಮಲಗಿದ್ದಲ್ಲೇ ಮೃತಪಟ್ಟಿದ್ದರು. ಅವರು ಮೃತಪಟ್ಟು ವಿಚಾರ ಯಾರಿಗೂ ತಿಳಿಯದ ಹಿನ್ನೆಲೆಯಲ್ಲಿ ಅವರ ಮೃತದೇಹ ಕೊಳೆತಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.