Share this news

ಕಾರ್ಕಳ: ನರೇಂದ್ರ ಮೋದಿ ಪ್ರಧಾನಿಯಾಗುವ ಮೊದಲು ದೇಶದಲ್ಲಿ ಬೆಳಗಿನ ಜಾವ ಬಹಿರ್ದೆಸೆಗೆ ಚೆಂಬು ಹಿಡಿದು ಬಯಲಿಗೆ ಹೋಗುವ ಅನಿವಾರ್ಯತೆ ಇತ್ತು.ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣವೇ 12 ಸಾವಿರ ಶೌಚಾಲಯಗಳನ್ನು ನಿರ್ಮಿಸಿ ಬಯಲು ಶೌಚಾಲಯಕ್ಕೆ ಮುಕ್ತಿ ಕೊಡಿಸಿದ್ದೇ ಮೋದಿ ಸರಕಾರ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ
ಅವರು ಶುಕ್ರವಾರ ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಕಾಂಗ್ರೆಸ್ ಪಕ್ಷದ ಚೊಂಬು ಜಾಹಿರಾತು ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ,ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೇಶದ ಮತದಾರರು ಚೊಂಬು ನೀಡಿವುದು ಖಚಿತ,ಆದ್ದರಿಂದ ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬು ಇಡುವುದೇ ಸೂಕ್ತ ಎಂದು ವ್ಯಂಗ್ಯವಾಡಿದರು.
ಉಡುಪಿ ಜಿಲ್ಲೆಯ ಶಾಸಕರು, ಚಿಕ್ಕಮಗಳೂರಿನಲ್ಲಿ ವಿಶೇಷವಾಗಿ ಸಿ ಟಿ ರವಿರವರು ಮತ್ತು ಎಲ್ಲಾ ಬಿಜೆಪಿಯ ಮುಖಂಡರ ತಂಡ ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ಅವರು ಮಾಡಿದ ಅಭಿವೃದ್ದಿ ಕೆಲಸಗಳು ನನ್ನ ಗೆಲುವಿನಲ್ಲಿ ನೆರವಿಗೆ ಬರುತ್ತದೆ ಎಂಬ ವಿಶ್ವಾಸವಿದೆ.

ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿ ಮಾಡಿರುವ ಕೆಲಸಗಳು, ಪಾರ್ದರ್ಶಕ ಆಡಳಿತಗಳು ಜನರಲ್ಲಿ ಜನಸಾಮಾನ್ಯನೊಬ್ಬ ಸಂಸತ್ತಿಗೆ ಹೋಗುವುದನ್ನು ನೋಡಬೇಕು ಎಂಬ ಭಾವನೆ ಮೂಡಿದೆ.

ಉಡುಪಿ ಜಿಲ್ಲೆಗೆ ಕುಚ್ಚಲಕ್ಕಿ ನೀಡುತ್ತೀರಿ ಎಂದ ನೀವು ಮೌನವಾಗಿದ್ದೀರಿ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು,ಉಡುಪಿ ಜಿಲ್ಲೆಗೆ ಕುಚ್ಚಲಕ್ಕಿ ನೀಡಿದರೆ ಊಟಕ್ಕೆ ಒಳ್ಳೆಯದಾಗುತ್ತದೆ ಎಂದು ನಾನು ಸರಕಾರದಲ್ಲಿರುವಾಗ ವಾದ ಮಂಡಿಸಿದ್ದೆ. ಒಂದು ಲಕ್ಷ ಕ್ವಿಂಟಾಲ್ ಕುಚ್ಚಲಕ್ಕಿ ತಯಾರು ಮಾಡಲು ಹದಿನಾರು ಲಕ್ಷ ಕ್ವಿಂಟಾಲ್ ಭತ್ತ ಬೇಕು. ಇಲ್ಲಿಯವರೆಗೆ ಕುಚ್ವಲಕ್ಕಿ ಮಾಡಬೇಕಾದರೆ ನಾಲ್ಕು ಐದು ತಳಿಗಳಿಂದ ಮಾತ್ರ ಸಾಧ್ಯ. ಈ ನಾಲ್ಕು ತಳಿಗಳಿಗೆ ಕರ್ನಾಟಕದಲ್ಲಿ ಬೆಂಬಲ ಬೆಲೆಯೇ ಇಲ್ಲ. ಸಂಸದರ ನೆರವಿನೊಂದಿಗೆ ನಾವು ಕೇಂದ್ರದಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿ ಆದೇಶ ಹೊರಡಿಸಿದ್ದೆವು. ಕಾಪುವಿಗೆ ಮುಖ್ಯಮಂತ್ರಿಗಳು ಬಂದಾಗ ಪ್ರತಿ ಕ್ವಿಂಟಾಲ್ ಗೆ ರೂ 500 ಬೆಂಬಲ ಬೆಲೆ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಭತ್ತ ಖರೀದಿಗೆ ನಮಗೆ ಅಂದು ಭತ್ತ ಸಿಕ್ಕಿರಲಿಲ್ಲ.ಆದರೆ ಈ ಕುರಿತು  ನನ್ನ ಸ್ನೇಹಿತರಾದ ಕಾಂಗ್ರೆಸ್ ನ ಗೋಪಾಲ ಪೂಜಾರಿಯವರು ನನ್ನ ಸರಕಾರ ಬಂದರೆ ಒಂದೇ ತಿಂಗಳಲ್ಲಿ ಕುಚ್ಚಲಕ್ಕಿ ನೀಡುವುದಾಗಿ ಭಾಷಣ ಮಾಡಿದರು.ಇದೀಗ ಅವರ ಸರ್ಕಾರ ಬಂದು ಒಂದು ವರ್ಷವಾದರೂ ಕುಚ್ಚಲಕ್ಕಿ ನೀಡಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಹುಲಿ ಯೋಜನೆ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದ ಅವರು, ದೇಶದ ವ್ಯವಸ್ಥೆಯಲ್ಲಿ ಕಾಡನ್ನು ಉಳಿಸಬೇಕು. ಹುಲಿ ಯೋಜನೆ, ಕಸ್ತೂರಿ ರಂಗನ್ ಯೋಜನೆ ಸೇರಿದಂತೆ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದೇನೆ. ಎಲ್ಲಾ ಕಾಡುಗಳೂ ಉಳಿಬೇಕು ಆದರೆ ನಾಡಿನಲ್ಲಿರುವ ಜನರ ಬದುಕಿಗೆ ತೊಂದರೆಯಾಗಬಾರದು. ಜನಜೀವನಕ್ಕೆ ತೊಂದರೆಯಾಗದಂತೆ ಕಾಡನ್ನು ಸಂರಕ್ಷಣೆ ಮಾಡುವ ಕೆಲಸವಾಗವೇಕಿದೆ ಎಂದರು.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಕುರಿತು ಮಾತನಾಡಿ, ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯಕೃತ್ಯ ಹುಬ್ಬಳ್ಳಿಯಲ್ಲಿ ನಡೆದುಹೋಯಿತು. ಕಾಂಗ್ರೆಸ್ ನ ನಗರ ಸಭಾ ಸದಸ್ಯನ ಮಗಳನ್ನು 9 ಸಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಈ ರೀತಿ ಘಟನೆ ಆದಾಗ ಇಡೀ ರಾಜ್ಯದ ಜನರು ಈ ರೀತಿ ಆಗಬಾರದು ಎಂದು ಮರುಗಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದು ವೈಯುಕ್ತಿಕ ವಿಚಾರಕ್ಕೆ ನಡೆದ ಹತ್ಯೆ ಎನ್ನುವ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು. ಮೃತಳ ತಂದೆ ಮಾಧ್ಯಮದ ಮುಂದೆ ಇವತ್ತು ನನ್ನ ಮಗಳು ಯಾವುದಾದರೂ ವ್ಯವಹಾರದಲ್ಲಿ ಅವನ ಜೊತೆ ಭಾಗಿಯಾಗಿದ್ದಳಾ, ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಾನೂನು ಬಾಹಿರ ಕೃತ್ಯ ನಡೆಸುವವರು, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವವರು ಮತಾಂಧ ಶಕ್ತಿಗಳು ವಿಜೃಂಬಿಸಲು ಸಿದ್ದರಾಮಯ್ಯನವರ ಸರಕಾರದಲ್ಲಿ ಬಹಳಷ್ಟು ಅವಕಾಶವಿದೆ.ಸರಕಾರವನ್ನು ಮತಾಂಧ ಶಕ್ತಿಗಳು ಸರ್ಕಾರವನ್ನೇ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರಾ ಎಂಬ ಆತಂಕವಾಗುತ್ತಿದೆ.ಸಿದ್ದರಾಮಯ್ಯನವರಲ್ಲಿ ಇಂತಹವರಿಗೆ ಪ್ರೋತ್ಸಾಹ ನೀಡಬಾರದೆಂದು ಆಗ್ರಹ ಮಾಡುತ್ತಿದ್ದೇನೆ. ವಿಧಾನಸೌಧ ದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದಾಗ ಜಾಗ್ರತೆ ವಹಿಸಿದ್ದರೆ ಈ ದಿನ ಇಂತಹ ಘಟನೆ ನಡೆಯುತ್ತಿರಲಿಲ್ಲ. ಮತೀಯ ಶಕ್ತಿಗಳ ಜೊತೆ ಕೈಜೋಡಿಸುವುದು ಬಿಟ್ಟು ಮುಖ್ಯಮಂತ್ರಿಗಳು ತಮ್ಮ ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದ್ದಾರೆ

 

 

 

 

 

 

 

 

 

Leave a Reply

Your email address will not be published. Required fields are marked *