ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸಮಯದಲ್ಲಾಗುವ ಅಪಘಾತ ಪ್ರಕರಣಗಳಲ್ಲಿ ಮೂರನೇ ವ್ಯಕ್ತಿ ಅಂದರೆ ವಿಮಾ ಕಂಪನಿಗಳಿಂದ ಪರಿಹಾರದ ಮೊತ್ತ ಪಡೆಯುವುದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೋಟಾರು ವಾಹನಗಳ ಕಾಯಿದೆ 1988ಕ್ಕೆ ತಿದ್ದುಪಡಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಸಾಮಾಜಿಕ ಅಪರಾಧ ಮತ್ತು ವಿಮಾ ಕಂಪನಿಯನ್ನು ಹೊಣೆ ಮಾಡಿ ಪರಿಹಾರಕ್ಕೆ ಆದೇಶ ನೀಡುವುದರಿಂದ ಅಪಾಯಕಾರಿ ಪ್ರವೃತ್ತಿಯನ್ನು ಉತ್ತೇಜಿಸಿದಂತಾಗುತ್ತದೆ ಎಂದು ಏಕಸದಸ್ಯ ಪೀಠ ಆದೇಶ ನೀಡಿದೆ.
ಮದ್ಯಪಾನ ಮಾಡಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಒಳಗಾದ ಪ್ರಕರಣದಲ್ಲಿ ಬೆಂಗಳೂರಿನ ಪ್ರತೀಕ್ ಕುಮಾರ್ ತ್ರಿಪಾಠಿಗೆ 2.59 ಲಕ್ಷ ರೂ. ಪರಿಹಾರ ಪಾವತಿಸಲು ಆದೇಶಿಸಿದ ಮೋಟಾರ್ ವಾಹನಗಳ ಅಪಘಾತ ಪರಿಹಾರ ನ್ಯಾಯಾಧೀಕರಣದ ಆದೇಶ ಪ್ರಶ್ನಿಸಿ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ, ” ಎಂಎಸಿಟಿ ಆದೇಶದಂತೆ ಅಪಘಾತದ ಸಂತ್ರಸ್ತರಿಗೆ 2,59,000 ರೂ. ಪರಿಹಾರ ಪಾವತಿಸಬೇಕು,’ ಎಂದು ವಿಮಾ ಕಂಪನಿಗೆ ಆದೇಶಿಸಿದೆ. ಆದರೆ, ”ಆ ಮೊತ್ತವನ್ನು ವಿಮಾ ಕಂಪನಿ, ಕಾನೂನು ಪ್ರಕಾರ ವಾಹನ ಮಾಲೀಕರಿಂದ ವಸೂಲು ಮಾಡಿಕೊಳ್ಳಬೇಕು” ಎಂದು ಆದೇಶ ನೀಡಿದೆ.
ವಿಮಾ ಕಂಪನಿ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 147ರ ಪ್ರಕಾರ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವ ಪ್ರಕರಣಗಳಲ್ಲಿಅಪಘಾತಗಳಾದರೆ ವಿಮಾ ಕಂಪನಿ ಪರಿಹಾರ ಪಾವತಿಸಬೇಕಿಲ್ಲವೆಂದು ವಾದಿಸಿದೆ. ಈ ರೀತಿಯ ಪ್ರಕರಣಗಳಲ್ಲಿಪರಿಹಾರವನ್ನು ವಿಮಾ ಕಂಪನಿಗಳಿಗೆ ಪಾವತಿಸುವಂತೆ ಆದೇಶ ನೀಡುವುದು, ಸಾಮಾಜಿಕ ಅಪರಾಧವಾದ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಉತ್ತೇಜಿಸಿದಂತಾಗುತ್ತದೆ, ಎಂದು ನ್ಯಾಯಪೀಠ ಆದೇಶಿಸಿದೆ.