ಹೈದರಾಬಾದ್(ತೆಲಂಗಾಣ): ಸೂಜಿ ಚುಚ್ಚುವ ಅಗತ್ಯವಿಲ್ಲದೇ ರಕ್ತ ಪರೀಕ್ಷೆ ಮಾಡುವ ಎಐ ಆಧಾರಿತ ಡೈಗ್ನೊಸ್ಟಿಕ್ ಫೋಟೋ ಪ್ಲೆಥಿಸ್ಮೋಗ್ರಫಿ (ಪಿಪಿಜಿ) ಉಪಕರಣವನ್ನು ದೇಶದಲ್ಲೇ ಮೊದಲ ಬಾರಿಗೆ ಅನಾವರಣ ಮಾಡಲಾಗಿದೆ ನಿಲೋಫರ್ ಸರ್ಕಾರಿ ಆಸ್ಪತ್ರೆ ತಿಳಿಸಿದೆ.
ಸೋಮವಾರ ವೈದ್ಯಾಧಿಕಾರಿಗಳಾದ ಅಧಿಕಾರಿಗಳಾದ ಡಾ. ಲಾಲು ಪ್ರಸಾದ್ ರಾಥೋಡ್, ಡಾ. ವಿಜಯಕುಮಾರ್ ಮತ್ತು ಡಾ. ಮಾಧವಿ ಅವರೊಂದಿಗೆ ನಿಲೋಫರ್ ಆಸ್ಪತ್ರೆಯ ಅಧೀಕ್ಷಕ ಡಾ. ರವಿ ಕುಮಾರ್ ಅವರು ಈ ಸಾಧನವನ್ನು ಲೋಕಾರ್ಪಣೆ ಮಾಡಿದರು.
ಅಮೃತ ಸ್ವಾಸ್ಥ್ಯ ಭಾರತ ಕಾರ್ಯಕ್ರಮದಡಿಯಲ್ಲಿ ಪರಿಚಯಿಸಲಾದ ಉಪಕರಣ, ಫೋಟೋ ಪ್ಲೆಥಿಸ್ಮೋಗ್ರಫಿ (ಪಿಪಿಜಿ) ಅನ್ನು ಬಳಸಿಕೊಂಡು ವ್ಯಕ್ತಿಯ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ತ್ವರಿತವಾಗಿ ಪರೀಕ್ಷೆ ನಡೆಸಿ ವರದಿ ನೀಡುತ್ತದೆ. ಎಸ್ಇಡಿ ಸೆಲ್ಫೀ ರಿಂಗ್ ಲೈಟ್‌ನೊಂದಿಗೆ ಇರುವ ಎಲ್ಇಡಿ ಟ್ರೈಪಾಡ್ನಲ್ಲಿ ಅಳವಡಿಸಿದ ಪಿಪಿಜಿ ಸಾಧನದೊಂದಿಗೆ ಸಂಪರ್ಕಿತ ಮೊಬೈಲ್ ಸ್ಕ್ರೀನ್ ಕಡೆಗೆ 30 ರಿಂದ 40 ಸೆಕೆಂಡುಗಳು ನೋಡಿದರೆ ಸಾಕು, ರಕ್ತದೊತ್ತಡ (ಬಿಪಿ), ಆಮ್ಲಜನಕ ಶುದ್ಧತೆ (ಎಸ್‌ಪಿಒ 2), ಹೃದಯ ಬಡಿತ, ಉಸಿರಾಟ (ಶ್ವಾಸಕ್ರಿಯೆ), ಹೆಚ್‌ಆರ್‌ವಿ, ಒತ್ತಡ ಮಟ್ಟ, ಹಿಮೋಗ್ಲೋಬಿನ್, ನಾಡಿ ಬಡಿತ, ಸಿಂಪಥಿಟಿಕ್, ಪ್ಯಾರಾಸಿಂಪಥಿಟಿಕ್ ಆಕ್ಟಿವಿಟಿ ಸೇರಿದಂತೆ ಮುಂದಾತ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡುತ್ತದೆ ಎಂದು ಆಸ್ಪತ್ರೆಯ ವಕ್ತಾರ ತಿಳಿಸಿದ್ದಾರೆ.
ಆಸ್ಪತ್ರೆಯ ಅಧೀಕ್ಷಕ ಡಾ. ರವಿ ಕುಮಾರ್ ಮಾತನಾಡಿ, “ಮುಂದಿನ ಎರಡು ತಿಂಗಳಲ್ಲಿ ಸಾವಿರ ಮಕ್ಕಳ ಮೇಲೆ ಪರೀಕ್ಷೆಗಳನ್ನು ನಡೆಸಲಾಗುವುದು. ಸಂಗ್ರಹಿಸಿದ ಡೇಟಾವನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಫಲಿತಾಂಶಗಳು ಆಶಾದಾಯಕವಾಗಿದ್ದರೆ, ಈ ವ್ಯವಸ್ಥೆಯನ್ನು ರಾಜ್ಯಾದ್ಯಂತ ಇತರ ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸಲು ನಾವು ಶಿಫಾರಸು ಮಾಡಲು ಯೋಜಿಸಿದ್ದೇವೆ” ಎಂದು ಹೇಳಿದರು.