ನವದೆಹಲಿ, ಮೇ 26: ವಾಡಿಕೆಗಿಂತ ಮೊದಲೇ ಹಲವು ರಾಜ್ಯಗಳಿಗೆ ನೈಋತ್ಯ ಮುಂಗಾರು ಆಗಮನವಾಗಿದೆ. ಕರ್ನಾಟಕ, ಕೇರಳ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳದ ಬಳಿಕ ಮಹಾರಾಷ್ಟ್ರಕ್ಕೆ ಮುಂಗಾರು ಆಗಮನವಾಗಿದೆ. ಮುಂದಿನ ಎರಡು ದಿನಗಳಲ್ಲಿ ಮುಂಬೈ ತಲುಪಬಹುದು, ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.ಮುಂದಿನ ಮೂರು ದಿನಗಳಲ್ಲಿ ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳು, ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳು, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ, ಮಧ್ಯ ಮತ್ತು ಉತ್ತರ ಬಂಗಾಳಕೊಲ್ಲಿಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ.
ಈ ಬಾರಿ ಮುಂಗಾರು ನಿಗದಿತ ಸಮಯಕ್ಕಿಂತ 8 ದಿನ ಮೊದಲೇ ಕೇರಳ ತಲುಪಿದೆ. ಐಎಂಡಿ ಪ್ರಕಾರ, ಕೊನೆಯ ಬಾರಿಗೆ ರಾಜ್ಯದಲ್ಲಿ ಮಾನ್ಸೂನ್ ಇಷ್ಟು ಬೇಗ ಆಗಮಿಸಿದ್ದು 2009 ರ ಮೇ 23 ಮತ್ತು 2001 ರಂದು. ಕೇರಳದಲ್ಲಿ ಮಾನ್ಸೂನ್ ಆಗಮನದ ಸಾಮಾನ್ಯ ದಿನಾಂಕ ಜೂನ್ 1. ಆದಾಗ್ಯೂ, 1918 ರಲ್ಲಿ, ಮಾನ್ಸೂನ್ ಮೇ 11 ರಂದು ಕೇರಳಕ್ಕೆ ಆಗಮಿಸಿತ್ತು.
ವಾಡಿಕೆಗಿಂತ ಮೊದಲೇ ಕೇರಳ ಪ್ರವೇಶಿಸಿರುವ ಮುಂಗಾರು, ರಾಜ್ಯದ ಎಲ್ಲೆಡೆ ನಿರಂತರವಾಗಿ ಮಳೆ ಸುರಿಯುಂತೆ ಮಾಡಿದೆ.ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಮಾರ್ಗದಲ್ಲಿ ಭಾನುವಾರ ಹಲವು ಕಡೆ ಗುಡ್ಡ ಕುಸಿದು ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು. ಆನೆಮಹಲ್ ಬಳಿ ಹೆದ್ದಾರಿಯ ಬದಿಯ ಮಣ್ಣು ಕುಸಿದು ರಸ್ತೆಯೇ ಮಣ್ಣೀನಿಂದ ಆವೃತವಾಗಿದೆ. ಇದೇ ಮಾರ್ಗದ ಅಡ್ಡನಗುಡ್ಡ, ದೊಡ್ಡತಪ್ಲು ಬಳಿ ಕೂಡ ಅತಿಯಾದ ಮಳೆಯಿಂದ ಬರೆ ಕುಸಿದು ರಸ್ತೆ ಸಂಚಾರವೇ ಬಂದ್ ಆಗುವ ಭೀತಿ ಎದುರಾಗಿದೆ.
ಅತಿಯಾದ ವಾಹನದಟ್ಟಣೆಯಿಂದ ಭಾನುವಾರ ಕೆಲ ಕಾಲ ಸಂಚಾರದ ಮಾರ್ಗವನ್ನೇ ಬದಲಾಯಿಸಲಾಗಿತ್ತು. ಬೆಳಗ್ಗೆಯಿಂದ ಎಡೆಬಿಡದೆ ಸುರಿದ ಮಳೆಯಿಂದ ಸಕಲೇಶಫುರ ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಮಲ್ನಾಡ್ ಕೆಫೆ ಹೊಟೆಲ್ ಗೋಡೆ ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸಕಲೇಶಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.