
ತುಮಕೂರು,ಜೂ.8: ಪಾಕಿಸ್ತಾನ ಮೂಲದ ಉಗ್ರನೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ ತುಮಕೂರು ಮತ್ತು ದಾವಣಗೆರೆ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಇನ್ಸ್ಟಾಗ್ರಾಮ್ ಮೂಲಕ ಯುವಕರನ್ನು ಸಂಪರ್ಕಿಸಿ, ಬ್ರೈನ್ವಾಶ್ ಮಾಡಿ ದೇಶದಲ್ಲಿ ಕುಕೃತ್ಯಕ್ಕೆ ಪಾಕ್ ಉಗ್ರ ರಾಣಾ ಸಂಚು ರೂಪಿಸಿದ್ದ ಸ್ಫೋಟಕ ಮಾಹಿತಿ ಬಯಲಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಯುವಕರಿಗೆ ಪರಿಚಯವಾಗಿದ್ದ ಪಾಕಿಸ್ತಾನದ ರಾಣಾ ಎಂಬಾತ, ಆರಂಭದಲ್ಲಿ ಧರ್ಮದ ಆಚರಣೆ ಹಾಗೂ ಧರ್ಮಗುರುಗಳ ಪ್ರವಚನಗಳನ್ನು ಹಂಚಿಕೊಳ್ಳುತ್ತಿದ್ದ. ಆ ನಂತರ ಧರ್ಮಕ್ಕಾಗಿ ಕೆಲಸ ಮಾಡಬೇಕು ಎಂದು ಬಂಧಿತ ಅಲ್ಲಾಬಕ್ಷು ತಲೆಯಲ್ಲಿ ತುಂಬಿ ಬ್ರೈನ್ವಾಶ್ ಮಾಡಿದ್ದ ಎನ್ನಲಾಗಿದೆ. ಅಲ್ಲಾಬಕ್ಷು ಮೊಬೈಲ್ನಲ್ಲಿ ಪಾಕಿಸ್ತಾನದ ಕೋಡ್ ಹೊಂದಿರುವ ನಂಬರ್ ಪತ್ತೆಯಾಗಿದ್ದು, ಅದನ್ನು ‘Rana bhi bhi’ ಎಂದು ಆತ ಸೇವ್ ಮಾಡಿಕೊಂಡಿದ್ದ ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿದೆ.
ಪಾಕ್ ಉಗ್ರ ರಾಣಾ ಸಂಪರ್ಕಕ್ಕೆ ಸಿಕ್ಕ ಬಳಿಕ ಅಲ್ಲಾಬಕ್ಷು ಇನ್ಸ್ಟಾಗ್ರಾಮ್ನಲ್ಲಿ ಹಿಂದಿಯಲ್ಲಿ ಚರ್ಚೆ ಮಾಡಿದ್ದ. ಅಲ್ಲದೇ ರಾಣಾನಿಗೆ ಅಲ್ಲಾಬಕ್ಷು, “ಇನ್ಷಾ ಅಲ್ಲಾ, ಯಾವುದೇ ಕೆಲಸ ಇರಲಿ, ಯಾವುದೇ ರೀತಿಯ ಕೆಲಸ ಇರಲಿ, ನಿನ್ನ ತಮ್ಮನನ್ನು ನೆನಪಿಸಿಕೊ. ನಾನು ಖಂಡಿತವಾಗಲೂ ಮಾಡುತ್ತೇನೆ ಎಂದಿದ್ದ. ಅಲ್ಲಾಬಕ್ಷುಗೆ ದ್ವೇಷದ ತರಬೇತಿ ನೀಡಿದ್ದ ರಾಣಾ ನಮ್ಮ ಧರ್ಮದವರನ್ನು ದ್ವೇಷಿಸುವವರನ್ನು ಹಂತ ಹಂತವಾಗಿ ನಾಶ ಮಾಡಬೇಕು. ಅದಕ್ಕಾಗಿ 50 ರಿಂದ 60 ಮಂದಿಯನ್ನು ತಯಾರು ಮಾಡು. ನಾನು ಹೇಳಿದ ಹಾಗೆ ಅವರಿಗೆ ತರಬೇತಿ ನೀಡು, ನಿನಗೆ ಎಷ್ಟು ಹಣ ಬೇಕೋ ಅಷ್ಟು ನಾನು ಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದ.
ರಾಣಾನೇ ಅಲ್ಲಾಭಕ್ಷುಗೆ ಜಮೀರ್ ಖಾನ್ ಎಂಬವನನ್ನು ಪರಿಚಯಿಸಿದ್ದ. ಈ ಇಬ್ಬರು ಜೊತೆಯಾಗಿ ದೇಶ ವಿರೋಧಿ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಗೆ ಮಹತ್ವದ ಸುಳಿವು ಲಭಿಸಿತ್ತು.
ಕೂಡಲೇ ಅಲರ್ಟ್ ಆದ ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿ ಆಧರಿಸಿ ತುಮಕೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಭಯೋತ್ಪಾದನಾ ಸಂಚಿನ ಮತ್ತಷ್ಟು ಆಳವಾದ ಸಂಗತಿಗಳನ್ನು ಕೆದಕುತ್ತಿದೆ.


.
.
.
.
.
.
.
.
.
.
.
.
.
.
.
.
.
.
.
.
