ನವದೆಹಲಿ: ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸಂಸತ್ತಿನಲ್ಲಿ ಶೀಘ್ರದಲ್ಲೇ ಈ ಮಸೂದೆಯನ್ನು ಮಂಡಿಸಲು ಯೋಜಿಸಲಾಗಿದೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯ ಬಗ್ಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು 18,626 ಪುಟಗಳನ್ನು ಒಳಗೊಂಡಿರುವ ತನ್ನ ವರದಿಯನ್ನು ಮಾರ್ಚ್ 2024ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತ್ತು.
ಕೇಂದ್ರ ಸರ್ಕಾರ ಒಂದು ರಾಷ್ಟ್ರ ಒಂದು ಚುನಾವಣೆಯ ಮಸೂದೆ ಸಂಬಂಧ ಸಮಗ್ರ ವರದಿಯನ್ನು ಸಿದ್ದಪಡಿಸಿದೆ. ಹಾಲೀ ಅಧಿವೇಶನದಲ್ಲಿ ಇದನ್ನು ಸದನದಲ್ಲಿ ಇಡಲಾಗುವುದು, ಅದಾದ ನಂತರ, ಸ್ಪೀಕರ್ / ಅಧ್ಯಕ್ಷರ ಅನುಮತಿಯನ್ನು ಪಡೆದು ಚರ್ಚೆಗೆ ಒಳಪಡಿಸಲಾಗುವ ಸಾಧ್ಯತೆಯಿದೆ.
ಲೋಕಸಭೆ ಚುನಾವಣೆ ಮುಗಿದರೆ ವಿಧಾನಸಭೆ ಚುನಾವಣೆ ಬರುತ್ತದೆ. ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಮುಗಿದಿದೆ. ಈಗ ದೆಹಲಿ ವಿಧಾನಸಭಾ ಚುನಾವಣೆಗಳು ಬರಲಿವೆ. ಇವು ಖರ್ಚುಗಳನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಅಭಿವೃದ್ಧಿಗೂ ತೊಡಕು ಉಂಟುಮಾಡುತ್ತದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದರು.
ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂತಹಂತವಾಗಿ ಚುನಾವಣೆಗಳನ್ನು ನಡೆಸುವ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿತ್ತು. ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯನ್ನು ಐತಿಹಾಸಿಕ ಎಂದು ಬಣ್ಣಿಸಿದೆ. ಈ ಕ್ರಮವು ವೆಚ್ಚವನ್ನು ನಿಯಂತ್ರಿಸಲು ಪರಿಣಾಮಕಾರಿ ಮತ್ತು ಆಡಳಿತ ಸ್ನೇಹಿಯಾಗಿದೆ ಎಂದು ಹೇಳಿಕೊಂಡಿದೆ. ಹಲವಾರು ಸಂದರ್ಭಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆಯ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಇದು ಸಮಯದ ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.