ಪಡುಬಿದ್ರೆ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವಮೊಗ್ಗದ ಸೂಳೆಬೈಲು ನಿವಾಸಿ ಮೊಹಮದ್ ರುಹಾನ್, ಶಿವಮೊಗ್ಗದ ಗೋಪಾಲ ನಿವಾಸಿ ತಾಜುದ್ದೀನ್ ಪಿ ಕೆ @ ತಾಜು ಎಂಬವರನ್ನು ಬಂಧಿಸಿದ ಪಡುಬಿದ್ರಿ ಪೊಲೀಸರು ಸುತ್ತನ್ನು ವಶಪಡಿಸಿದ್ದಾರೆ.
2025ರ ಜನವರಿ 21 ರಂದು ರಾತ್ರಿ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದಲ್ಲಿ ಘಟನೆ ನಡೆದಿತ್ತು. ಪರೀಕ್ಷಿತ್ ಶೆಟ್ಟಿ ಎಂಬವರು ಪಡುಬಿದ್ರಿ ಪೇಟೆಯಲ್ಲಿ ತನ್ನ ಬುಲೆಟ್ ಬೈಕ್ ನ್ನು ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದು ಬೆಳಗ್ಗೆ ಕೆಲಸ ಮುಗಿಸಿ ವಾಪಸ್ ಬಂದು ನೋಡಿದಾಗ ಅಲ್ಲಿ ಬೈಕ್ ಇಲ್ಲದೆ ಇದ್ದು ಬೈಕನ್ನು ಯಾರೋ ಕಳವು ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಎಸ್ ಐ ಪ್ರಸನ್ನ ಎಮ್ ಎಸ್ ರವರ ಆದೇಶದಂತೆ ಎಎಸ್‌ಐ ರಾಜೇಶ್, ಹೆಚ್ ಸಿ ಗಳಾದ ಕೃಷ್ಣಪ್ರಸಾದ್, ನಾಗರಾಜ್ ಸನಿಲ್, ಪಿಸಿ ಗಳಾದ ಸಂದೇಶ, ಶರಣ್ ಪುತ್ರನ್ ರವರು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿ ಡಿ ಆರ್ ವಿಭಾಗದ ಸಿಬ್ಬಂದಿ ದಿನೇಶ್ ರವರ ಸಹಕಾರದಿಂದ ಆರೋಪಿಗಳಾದ ಮೊಹಮದ್ ರುಹಾನ್, ತಾಜುದ್ದೀನ್ ಪಿ ಕೆ @ ತಾಜುರವರನ್ನು ಬಂಧಿಸಿದ್ದಾರೆ.
ಪಡುಬಿದ್ರಿಯಲ್ಲಿ ಕಳವು ಮಾಡಿದ ಬುಲ್ಲೆಟ್ ಮೋಟರು ಸೈಕಲನ್ನು ಮತ್ತು ಕಳ್ಳತನ ಸಮಯ ಆರೋಪಿಗಳು ಉಪಯೋಗಿಸಿದ ಮಾರುತಿ ರಿಟ್ಜ್ ಕಾರನ್ನು (ಒಟ್ಟು ಮೌಲ್ಯ ರೂ. 4 ಲಕ್ಷ ) ಸ್ವಾಧೀನ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ನೀಡಿರುತ್ತದೆ.
ಆರೋಪಿ ತಾಜುದ್ದೀನ್ ಮೇಲೆ ಶಿವಮೊಗ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆ, ವಿನೋಬನಗರ ಪೊಲೀಸ್ ಠಾಣೆ, ತುಂಗಾ ನಗರ ಪೊಲೀಸ್ ಠಾಣೆ, ದೊಡ್ಡಪೇಟೆ ಪೊಲೀಸ್ ಠಾಣೆ, ಆಗುಂಬೆ ಪೊಲೀಸ್ ಠಾಣೆ ಗಳಲ್ಲಿ ದರೋಡೆ, ವಿದ್ಯಾರ್ಥಿಯ ಅಪಹರಣ, ವಾಹನ ಕಳವು, ಸಾಗರ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದರೋಡೆ ಮತ್ತು ವಾಹನ ಕಳ್ಳತನ, ಹಾಸನ ಜಿಲ್ಲೆಯಲ್ಲಿ ದರೋಡೆ ಮತ್ತು ಮನೆ ಕಳವು ಪ್ರಕರಣ, ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಮತ್ತು ಮನೆ ಕಳವು ಪ್ರಕರಣಗಳು ದಾಖಲಾಗಿದ್ದು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಾನ್ಯ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಇರುತ್ತದೆ.
ಆರೋಪಿ ಮೊಹಮ್ಮದ್ ರೂಹಾನ್ ವಿರುದ್ಧ ಬೆಂಗಳೂರು ಜಿಲ್ಲೆಯ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಕಳವು, ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ಅಪಹರಣ ಮತ್ತು ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.