Share this news

ಬೆಂಗಳೂರು: ರಾಜ್ಯಸಭಾ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ವಿಧಾನಸೌಧದ ಆವರಣದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಎನ್ನುವ ದೇಶದ್ರೋಹದ ಘೋಷಣೆ ಕೂಗಿದ್ದು, ಭಾರೀ ಕೋಲಾಹಲಕ್ಕೆ ಕಾರಣವಾಗಿದೆ‌.

ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಅವರ ಬೆಂಬಲಿಗರ ಪೈಕಿ ಒಬ್ಬರು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗಿದ್ದಾರೆ. ನಾಸಿರ್‌ ಹುಸೇನ್‌ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಜಿಂದಾಬಾದ್‌,ಜಿಂದಾಬಾದ್ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಾನೆ‌ ಇದೇ ವೇಳೆ ಪಕ್ಕದಲ್ಲಿದ್ದ ಕೆಲ ಕಾರ್ಯಕರ್ತರು ಆತನ ಬಾಯಿಮುಚ್ಚಿಸಲು ಯತ್ನಿಸಿದ ವಿಡಿಯೋ ವೈರಲ್‌ ಆಗಿದೆ.

ಪತ್ರಕರ್ತರ ಬಾಯಿ ಮುಚ್ಚಿಸಲು ನಾಸಿರ್ ಹುಸೇನ್‌ ಯತ್ನ!

ನೂತನ ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್ ಪರವಾಗಿ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದ ವಿಚಾರದ ಕುರಿತಾಗಿ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಈ ವೇಳೆ ನಾಸಿರ್ ಹುಸೇನ್‌ ಸಿಡಿಮಿಡಿಗೊಂಡಿದ್ದಾರೆ. ‘ಏಯ್ ನಡಿಯಯ್ಯಾ ಆಚೆ ಎಂದು ಪತ್ರಕರ್ತರ ವಿರುದ್ಧವೇ ನಾಸಿರ್‌ ಹುಸೇನ್‌ ಕೂಗಾಡಿ ಹೋಗಿದ್ದಾರೆ. ‘ಏಯ್ ನಡಿಯೋ.. ಯಾವನೋ ಅವನು. ಹುಚ್ಚನ ಹಾಗೆ ಪ್ರಶ್ನೆ ಕೇಳಬೇಡ ಎಂದು ವರದಿಗಾರರ ಮೇಲೆಯೇ ನಾಸಿರ್ ಹುಸೇನ್‌ ಕೂಗಾಡಿದ ವಿಡಿಯೋ ಕೂಡ ವೈರಲ್‌ ಆಗಿದೆ.

ಆ ರೀತಿ ಘೋಷಣೆ ಯಾರು ಕೂಗಿದ್ದಾರೆ ಗೊತ್ತಿಲ್ಲ. ಯಾರೇ ಮಾಡಿದ್ದರೂ ಅದೂ ತಪ್ಪು. ಯಾರು ಮಾಡಿದ್ದಾರೆ ಎನ್ನುವುದನ್ನು ಪರಿಶೀಲನೆ ಮಾಡಬೇಕು ಎಂದು ಜಿಸಿ ಚಂದ್ರಶೇಖರ್ ಹೇಳಿದ್ದಾರೆ. ಇನ್ನೊಂದೆಡೆ ಘಟನೆಯ ಬಗ್ಗೆ ಮಾತನಾಡಿದ ಬಿವಿ ಶ್ರೀನಿವಾಸ್‌, ಉದ್ದೇಶಪೂರ್ವಕವಾಗಿ ಮಾಡಿದ್ದಾರೋ ಗೊತ್ತಿಲ್ಲ. ಸೋತಿದ್ದಾರೆ ಅಂತ ಮಾಡಿದ್ದಾರೊ ಗೊತ್ತಿಲ್ಲ ಎಂದಿದ್ದಾರೆ ‌

ಈ ಘಟನೆ ಕುರಿತು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್,ಮುಸ್ಲಿಮರ ಓಲೈಕೆಗಾಗಿ ಹೀಗೆ ಮಾಡ್ತಿದ್ದಾರೆ. ನಾಸಿರ್‌ ಹುಸೇನ್‌ ಅವರ ರಾಜ್ಯಸಭಾ ಸ್ಥಾನ ಈ ಕೂಡಲೇ ರದ್ದಾಗಬೇಕು. ಈ ದೇಶವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಇಂಥವರನ್ನು ನರಕವಾಗಿರುವ ಪಾಕಿಸ್ತಾನಕ್ಕೇ ಕಳಿಸಬೇಕು ಎಂದು ಹೇಳಿದ್ದಾರೆ.

ದೂರು ನೀಡಲು ಬಿಜೆಪಿ ನಿರ್ಧಾರ:

ವಿಧಾನ ಸೌದದಲ್ಲೇ ದೇಶ ದ್ರೋಹದ ಕೂಗು ಮೊಳಗಿರುವ ಕುರಿತು ಬಿಜೆಪಿ ಕಾಂಗ್ರೆಸ್ ವಿರುದ್ಧ ದೂರು ನೀಡಲು ನಿರ್ಧರಿಸಿದೆ. ವಿಧಾನಸೌಧದ ಆವರಣದಲ್ಲಿಯೇ ಈ ರೀತಿಯ ಘೋಷಣೆ ಕೂಗಿದ್ದು ಸರಿಯಲ್ಲ ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ಖಂಡಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್‌ ಎಂದಿರುವುದು ದೇಶದ್ರೋಹದ ಕೇಸ್‌ ಎಂದಿದ್ದಾರೆ. ಬೆಂಗಳೂರು ಪೊಲೀಸ್‌ ಕಮೀಷನರ್‌ ಬಿ. ದಯಾನಂದ್‌, ಈ ಕುರಿತಾಗಿ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ಈಗಷ್ಟೇ ವಿಚಾರ ಗೊತ್ತಾಗಿದೆ. ಇದರ ಬಗ್ಗೆ ಪರಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

             

Leave a Reply

Your email address will not be published. Required fields are marked *