ಬೆಂಗಳೂರು: ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಉಮಿಕ್ಕಲ್ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾದ ಪರಶುರಾಮನ ಪ್ರತಿಮೆಯ ಗುಣಮಟ್ಟ ಕಳಪೆಯಾಗಿದೆ ಹಾಗೂ ಕಾರ್ಯಾದೇಶವಿಲ್ಲದೇ ಗುತ್ತಿಗೆದಾರನಿಗೆ ಯೋಜನೆಯನ್ನು ವಹಿಸಿ ಕಾಮಗಾರಿ ಮುಕ್ತಾಯಕ್ಕೂ ಮುನ್ನವೇ ಸರ್ಕಾರದ ಹಣವನ್ನು ಗುತ್ತಿಗೆದಾರನ ಖಾತೆಗೆ ವರ್ವಾವಣೆ ಮಾಡಲಾಗಿದ್ದು ಈ ಪ್ರಕರಣದ ತನಿಖೆಗೆ ಆದೇಶಿಸಬೇಕೆಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕೃಷ್ಣ ಶೆಟ್ಟಿ ಎಂಬವರು ಈ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿದೆ ಆದ್ದರಿಂದ ಹೈಕೋರ್ಟ್ ಸಮಗ್ರ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ,ಈ ಪ್ರಕರಣದ ಕುರಿತು ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದೆ, ಆದ್ದರಿಂದ ತನಿಖಾ ಹಂತದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಒಟ್ಟಿನಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಪರಶುರಾಮ ಥೀಮ್ ಪಾರ್ಕ್ ವಿಚಾರವೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಬಲ ತುಂಬಿದ್ದು, ಈ ಪ್ರಕರಣ ಸಧ್ಯ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತ ಪೊಲೀಸರು ಪರಶುರಾಮನ ಪ್ರತಿಮೆಯ ಬಿಡಿಭಾಗಗಳನ್ನು ಭದ್ರತೆಯಲ್ಲಿ ಪೊಲೀಸ್ ಠಾಣೆಯಲ್ಲಿ ಇರಿಸಿದ್ದು ಇದು ಕೂಡ ಸಾರ್ವಜನಿಕ ವಲಯದಲ್ಲಿ ಭಾರೀ ಪರವಿರೋಧದ ಚರ್ಚೆಗೆ ಕಾರಣವಾಗಿದೆ.ತುಳುನಾಡಿನ ಸೃಷಿಕರ್ತ ಪರಶುರಾಮ ಪೊಲೀಸ್ ಠಾಣೆಯಲ್ಲಿ ಕೂರುವ ದುಸ್ಥಿತಿ ಬಂತಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
`