Share this news

ಮಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಮತ್ತೊಬ್ಬ  ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್​ನನ್ನು ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಬಂಧಿಸಿದ್ದಾರೆ. ಕತಾರ್​ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ರಹಿಮಾನ್​ ಶುಕ್ರವಾರ (ಜು.04) ಕತಾರ್​ನಿಂದ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಇತರ ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ಆರೋಪಿ ಅಬ್ದುಲ್ ರಹಿಮಾನ್ ವಿದೇಶಕ್ಕೆ ಹಾರಿದ್ದ. ಹೀಗಾಗಿ, ಎನ್​ಐಎ ಅಧಿಕಾರಿಗಳು ಅಬ್ದುಲ್ ರಹಿಮಾನ್ ಸೇರಿದಂತೆ ಆರು ಮಂದಿಯ ಸುಳಿವು ಕೊಟ್ಟರೆ ಬಹುಮಾನ ಕೊಡುವುದಾಗಿ ಘೋಷಿಸಿದ್ದರು.ಪ್ರಕರಣ ಸಂಬಂಧ ಎನ್​ಐಎ ಅಧಿಕಾರಿಗಳು ಆರೋಪಿ ಅಬ್ದುಲ್ ರಹಿಮಾನ್ ಸೇರಿದಂತೆ ಒಟ್ಟು 28 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪಿಎಫ್​ಐ ಪ್ರಮುಖರ ಸೂಚನೆ ಮೇರೆಗೆ ಅಬ್ದುಲ್ ರಹಿಮಾನ್ ಸೇರಿದಂತೆ ಇತರರು ಸೇರಿಕೊಂಡು ಪ್ರವೀಣ್ ನೆಟ್ಟಾರು ಕೊಲೆಗೆ ಸಂಚು ರೂಪಿಸಿದ್ದರು ಎಂದು ಎನ್​ಐಎ ಸಲ್ಲಿಸಿದ ಚಾರ್ಜ್​ ಶೀಟ್​ನಲ್ಲಿದೆ.

2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

 

Leave a Reply

Your email address will not be published. Required fields are marked *