ಕಾರ್ಕಳ : ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮುಂಗಾರುಪೂರ್ವ ಮಳೆಗೆ ಕಾರ್ಕಳ ತಾಲೂಕಿನಲ್ಲಿ ಹಲವೆಡೆ ಅವಾಂತರಗಳಾಗಿದ್ದು ಅಪಾರ ಹಾನಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ_ 169 ಸಾಣೂರು ಪದ್ಮನಾಭ ನಗರದ ಗುಡ್ಡದ ತುದಿಯಲ್ಲಿರುವ ಹೈಟೆನ್ಶನ್ ಟವರ್ ಬುಡದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗುಡ್ಡದ ಮೇಲಿನ ದೊಡ್ಡ ದೊಡ್ಡ ಕಲ್ಲುಗಳು ಹಾಗೂ ಮಣ್ಣು ಸರ್ವಿಸ್ ರಸ್ತೆಗೆ ಬೀಳುತ್ತಿದ್ದು, ವಾಹನ ಗಳಿಗೆ ಮತ್ತು ಸರ್ವಿಸ್ ರಸ್ತೆಯಲ್ಲಿ ನಡೆದಾಡುವ ಗ್ರಾಮಸ್ಥರಿಗೆ ಆತಂಕಕಾರಿಯಾಗಿ ಪರಿಣಮಿಸಿದೆ.
ಇನ್ನೊಂದೆಡೆ ಸಾಣೂರು” ಶಿವ ಕಮಲ” ಮನೆಯ ನಿವಾಸಿ ರಘುರಾಮ ಶೆಟ್ಟಿಯವರ ಮನೆಯ ಗೇಟಿನ ಎದುರಿನಲ್ಲಿಯೇ ರಸ್ತೆ ಬದಿಯಲ್ಲಿ ಮಣ್ಣು ಸುರಿದಿರುವುದರಿಂದ ಆವರಣ ಗೋಡೆಯ ಹೊರಗೆ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ 169 ಸಾಣೂರು ಗ್ರಾಮ ವ್ಯಾಪ್ತಿಯ ಯುವಕ ಮಂಡಲದ ಬಳಿ ಮಣ್ಣು ಕುಸಿದಿದೆ.ಸಾಣೂರು ಸಂಕದ ಬಳಿ ಹೆದ್ದಾರಿ ಪ್ರಾಧಿಕಾರದ ಚರಂಡಿ ವ್ಯವಸ್ಥೆ ಇಲ್ಲದೆ ಮೋಹನ್ ಶೆಟ್ಟಿ ಅವರ ಮನೆಯ ಬಳಿಗೆ ಮಳೆ ನೀರು ಬಂದು ಅವಾಂತರ ಸೃಷ್ಟಿಯಾಗಿದೆ.
ಎರ್ಲಪಾಡಿ ಗ್ರಾಮದ ವಿನೋದ ಶೆಟ್ಟಿ ಭೂತಾಲ್ ಮನೆ ಎಂಬುವವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಅಂದಾಜು 20,000 ರೂ. ನಷ್ಟ ಸಂಭವಿಸಿದೆ.