ಮಂಗಳೂರು: ಮಂಗಳೂರಿನ ಹೈರ್ ಗ್ಲೋ ಎಲಿಗಂಟ್ ಎಂಬ ಖಾಸಗಿ ಏಜೆನ್ಸಿಯು ನ್ಯೂಜಿಲೆಂಡ್‌ನಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ 185ಕ್ಕೂ ಹೆಚ್ಚು ಜನರಿಂದ 8 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಿಸಿ ವಂಚಿಸಿದ ಆರೋಪ ಕೇಳಿಬಂದಿದೆ.
ಹೈರ್ ಗ್ಲೋ ಎಲಿಗೆಂಟ್ ಓವರ್ಸೀಸ್ ಇಂಟರ್ನ್ಯಾಷನಲ್ ಪ್ರೈ.ಲಿ ಏಜೆನ್ಸಿಯಿಂದ ಕರ್ನಾಟಕ ಮಾತ್ರವಲ್ಲದೇ ಕೇರಳ ಸೇರಿದಂತೆ ಇತರ ಕೆಲವು ರಾಜ್ಯಗಳ ಜನರೂ ವಂಚನೆಗೆ ಒಳಗಾಗಿದ್ದಾರೆ. ಇದೀಗ ವಂಚನೆಗೊಳಗಾದವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ವಂಚನೆಯ ಕರಾಳ ಮುಖ ಅನಾವರಣಗೊಂಡಿದೆ.
ಸಂಸ್ಥೆಯು 185ಕ್ಕೂ ಹೆಚ್ಚು ವ್ಯಕ್ತಿಗಳಿಂದ ತಲಾ 1ಲಕ್ಷದ 85 ಸಾವಿರ ರೂನಂತೆ., ಎಜೆಂಟ್ಗಳ ಮುಖಾಂತರ ಸುಮಾರು 60 ಮಂದಿಯಿಂದ ತಲಾ 3 ಲಕ್ಷ ರೂಪಾಯಿ ಹಾಗೂ ಬೇರೆ ಬೇರೆ ರಾಜ್ಯದ ಏಜೆನ್ಸಿಗಳ ಮೂಲಕ ತಲಾ 5ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಮಂದಿಯಿಂದ ಸುಮಾರು 8 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದಿರುವ ಆರೋಪ ಸಂಸ್ಥೆಯ ಮೇಲಿದೆ.
ಸಂತ್ರಸ್ತರ ಪೈಕಿ ಕೆಲವು ಮಂದಿ ವಿದೇಶದಲ್ಲಿ ಉದ್ಯೋಗ ಮಾಡುವ ಆಸೆಯಿಂದ ಇರುವ ಕೆಲಸವನ್ನೂ ತ್ಯಜಿಸಿದ್ದರು. ಇದೀಗ ಉದ್ಯೋಗವೂ ಇಲ್ಲದೆ ಹಣವೂ ಇಲ್ಲದೆ ದಿಕ್ಕೆಟ್ಟಿದ್ದಾರೆ. ಬಹುತೇಕ ಅಭ್ಯರ್ಥಿಗಳು. ಫೈನಾನ್ಸ್ ಸಾಲ, ಚಿನ್ನ ಅಡವಿಟ್ಟು ಹಣ ಹೊಂದಿಸಿದ್ದರು ಎನ್ನಲಾಗಿದೆ.
ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿಗೂ ವಂಚನೆ ಪ್ರಕರಣದ ಬಗ್ಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಸಂಸ್ಥೆಗೆ ಬೀಗ ಜಡಿದ ಪೊಲೀಸರು, ಕಚೇರಿಯೊಳಗಿದ್ದ ಕಂಪ್ಯೂಟರ್ ಸೇರಿದಂತೆ ದಾಖಲೆಗಳನ್ನು ಜಫ್ತಿ ಮಾಡಿದ್ದಾರೆ.