
ಕಾರ್ಕಳ: ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಕಾಮಗಾರಿಯು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಂಟುತ್ತಾ ಸಾಗುತ್ತಿದ್ದು ಅಪೂರ್ಣ ಕಾಮಗಾರಿಗಳಿಂದಾಗಿ ಸರಣಿ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ. ಮುರತಂಗಡಿ ಬ್ಯಾಂಕ್ ಆಫ್ ಬರೋಡ ಶಾಖೆಯ ಎದುರಿನಿಂದ ಸಾಣೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವರೆಗೆ ಚೈನೇಜ್ 694.640 ರಿಂದ 694.720 ಸುಮಾರು 800 ಮೀಟರ್ ಗಳಷ್ಟು ಉದ್ದದ ಸರ್ವಿಸ್ ರಸ್ತೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಪ್ರತಿದಿನ ಈ ಭಾಗದಲ್ಲಿ ಸಂಚರಿಸುವ ಬ್ಯಾಂಕ್ ಗ್ರಾಹಕರು, ವಿದ್ಯಾರ್ಥಿಗಳು ಮತ್ತು ನಾಗರಿಕರು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆ ದಾಟುತ್ತಿದ್ದು, ಮುರತಂಗಡಿ ಅಡ್ಡರಸ್ತೆಯಿಂದ ಬರುವ ವಾಹನಗಳು ನೇರವಾಗಿ ಮುಖ್ಯರಸ್ತೆಗೆ ಬಂದು ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ.
ಆದ್ದರಿಂದ ಈ ಭಾಗದ ಸರ್ವಿಸ್ ರೋಡ್ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಸಾಣೂರಿನ ನಾಗರಿಕರು ನಿರಾತಂಕವಾಗಿ ಸಂಚರಿಸಬಹುದು.ಈ ಬಗ್ಗೆ ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ದಿಲೀಪ್ ಬಿಲ್ಡ್ ಕಾನ್ ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಈ ನಿರ್ಲಕ್ಷ್ಯ ಧೋರಣೆಯಿಂದ ಸಾಣೂರಿನ ಜನತೆ ರೋಸಿ ಹೋಗಿದ್ದು, ಪ್ರತಿಭಟನೆಯ ಹಾದಿ ತುಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಮತ್ತು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ .
