ಬೆಂಗಳೂರು:ಕರ್ನಾಟಕ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಕಾಂಗ್ರೆಸ್ ಗೆ ಭರ್ಜರಿ ಗೆಲುವಾಗಿದ್ದು, ಕಾಂಗ್ರೆಸ್ ನಿರೀಕ್ಷೆಗಿಂತಲೂ ಹೆಚ್ಚು ಮತಗಳನ್ನು ಗಳಿಸಿ ಮೂರು ಅಭ್ಯರ್ಥಿಗಳು ಭರ್ಜರಿ ಮತಗಳಿಂದ ಗೆದ್ದಿದ್ದಾರೆ
ಕಾಂಗ್ರೆಸ್‌ನಿಂದ ಜಿಸಿ ಚಂದ್ರಶೇಖರ್,ಅಜಯ್ ಮಕೇನ್ ಹಾಗೂ ನಾಸೀರ್ ಹುಸೇನ್ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ನಾರಾಯಣ ಸಾ ಭಾಂಡಗೆ ಅವರು ಜಯಗಳಿಸಿದ್ದಾರೆ ಆದರೆ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಕುಪೇಂದ್ರ ರೆಡ್ಡಿ ಸ್ಪರ್ಧಿಸಿ ಹೀನಾಯವಾಗಿ ಸೋಲುಂಡಿದ್ದಾರೆ.
ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಕೇನ್ 47, ನಾಸೀರ್ ಹುಸೇನ್ 47, ಜಿ.ಸಿ. ಚಂದ್ರಶೇಖರ,45, ನಾರಾಯಣಸಾ ಭಾಂಡಗೆ 47, ಕುಪೇಂದ್ರ ರೆಡ್ಡಿ ಕೇವಲ 36 ಮತಗಳನ್ನು ಗಳಿಸಿದ್ದಾರೆ.
ಕೇವಲ ಕರ್ನಾಟಕ ರಾಜ್ಯ ಅಲ್ಲದೇ ಉತ್ತರ ಪ್ರದೇಶದ 10, ಮಹಾರಾಷ್ಟ್ರ 6, ಬಿಹಾರ 6, ಪಶ್ಚಿಮ ಬಂಗಾಳ 5, ಮಧ್ಯ ಪ್ರದೇಶ 5, ಗುಜರಾತ್ 4, ಆಂಧ್ರ ಪ್ರದೇಶ 3, ತೆಲಂಗಾಣ 3, ರಾಜಸ್ಥಾನ 3, ಕರ್ನಾಟಕ 4, ಉತ್ತರಾಖಂಡ 1, ಛತ್ತೀಸ್‌ಗಢ 1, ಒಡಿಶಾ 3, ಹರ್ಯಾಣ 1 ಹಾಗೂ ಹಿಮಾಚಲ ಪ್ರದೇಶದಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆದಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡ ಜಿ.ಪಾಟೀಲ್, ಈ ಕುರಿತು ಪಕ್ಷದ ವರಿಷ್ಠರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.