Share this news

ವಿಜಯನಗರ: ಅಯೋಧ್ಯೆ ರಾಮಮಂದಿರದ ಲೋಕಾರ್ಪಣೆಯಾದ ದಿನದಿಂದ ರಾಮನ ಕುರಿತು ಕಾಂಗ್ರೆಸ್ ಮುಖಂಡರು ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದು,ಇದೀಗ ಕೈ ಮುಖಂಡ ಉಗ್ರಪ್ಪ ರಾಮನ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಾಂತರ ಹಿಂದೂಗಳು ಶ್ರದ್ಧಾಭಕ್ತಿಯಿಂದ ಆರಾಧಿಸುವ, ಪೂಜಿಸುವ ಶ್ರೀರಾಮ ದೇವರಲ್ಲ ಅಂತ ಉಗ್ರಪ್ಪ ಹೇಳುವ ಮೂಲಕ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ವಿಜಯನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಗ್ರಪ್ಪ, ರಾಮ ದೇವರಲ್ಲ, ರಾಮ ದೇವರೇ ಅಲ್ಲ ಪುನರುಚ್ಚರಿಸಿದ್ದು, ರಾಮ ದೇವರಲ್ಲ, ರಾಮ ಮನುಷ್ಯ, ಆತ ರಾಜ, ರಾಜಕುಮಾರ ಅಂತ ಉಗ್ರಪ್ಪ ಹೇಳಿದ್ದಾರೆ. ನಿಮಗೇನಾದರೂ ಭಕ್ತಿ ಇದೆಯಾ ಅಂತ ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಅವರು, ರಾನ ತನ್ನ ಆದರ್ಶಗಳ ಮೂಲಕ ದೈವತ್ವವನ್ನು ಪಡೆದಿದ್ದಾನೆ ಎಂದು ಉಗ್ರಪ್ಪ ಪ್ರತಿಪಾದಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಉಗ್ರಪ್ಪ,ನಿನ್ನಲ್ಲಿ ರಾಮನ ಆದರ್ಶಗಳು ಇಲ್ಲದಿದ್ದರೆ ನೀನು ಹೇಗಪ್ಪಾ ರಾಮ ಭಕ್ತನಾಗುತ್ತೀಯಾ? ಪಾಪ ನಿನ್ನ ಶ್ರೀಮತಿ ಇಲ್ಲಿ ಅಂಜನಾದ್ರಿಗೆ, ಹಂಪಿಗೆ ಬಂದು ಹೋಗಿದ್ದಾರೆ. ಮೊದಲು ರಾಮಭಕ್ತನಾಗಿ ಆ ಹೆಣ್ಣು ಮಗಳ ರಕ್ಷಣೆ ಮಾಡಪ್ಪಾ ಅಂತ ಮಾತಿನ ಭರದಲ್ಲಿ ಪ್ರಧಾನಿ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ರಾಮಾಯಣದಲ್ಲಿ ಅಶ್ವಮೇಧ ಯಾಗ ಮಾಡಬೇಕಾದರೆ ಸತಿ ಪತಿ ಸೇರಿ ಮಾಡ್ಬೇಕು ಅಂತ ಗುರು ವಶಿಷ್ಠರು, ವಿಶ್ವಾಮಿತ್ರರು ಹೇಳುತ್ತಾರೆ. ಹಾಗಾಗಿ ಚಿನ್ನದ ಸೀತೆಯನ್ನು ಮಾಡಿ ರಾಮ ಪೂಜೆ ಮಾಡ್ತಾರೆ ಎಂದ ಉಗ್ರಪ್ಪ, ರಾಮ ಮಂದಿರ ಉದ್ಘಾಟನೆ ವೇಳೆ ನೀನೇನು ಮಾಡಿದ್ದೀಯಾ? ಇದು ಧರ್ಮವಿರೋಧಿ, ರಾಮನ ವಿಚಾರಕ್ಕೆ ವಿರೋಧಿ ಅಲ್ಲವೇ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು.    

Leave a Reply

Your email address will not be published. Required fields are marked *