ಬೆಂಗಳೂರು: ಹೊಟೇಲ್ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟ ಪ್ರಕರಣದ ಕುರಿತಂತೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ತನಿಖೆಯ ಹಂತದಲ್ಲಿ ಅನುಮಾನದ ಮೇರೆಗೆ ಓರ್ವ ಶಂಕಿತ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಂಕಿತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಸುಮಾರು 11.40ರ ವೇಳೆಗೆ ಆಗಂತುಕ ರಾಮೇಶ್ವರಂ ಕೆಫೆ ಬಂದು, ತನ್ನ ಭುಜದಲ್ಲಿ ಸೈಡ್ ಬ್ಯಾಗ್, ತಲೆಗೆ ಟೋಪಿ ಹಾಕಿಕೊಂಡು ರಾಮೇಶ್ವರಂ ಕೆಫೆ ಪ್ರವೇಶಿಸಿದ್ದಾನೆ. ಹೊಟೇಲ್ ನಲ್ಲಿ ಸ್ವಲ್ಪ ಹೊತ್ತು ಗಮನಿಸಿ ಕಾಲ ಕಳೆದಿದ್ದಾನೆ.ಬಳಿಕ ತಿಂಡಿ ತಿಂದು ಬಳಿಕ ತನ್ನ ಬ್ಯಾಗನ್ನು ಹ್ಯಾಂಡ್ ವಾಷ್ ಬಳಿ ಇರಿಸಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಶಂಕಿಸಲಾಗಿದೆ.
ಆತ ತೆರಳಿದ ಬಳಿಕ ಒಂದು ಘಂಟೆಯ ನಂತರ ಬ್ಲಾಸ್ಟ್ ಆಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಶಂಕಿತ ವ್ಯಕ್ತಿ ಸುಮಾರು 30ರ ವಯಸ್ಸಿನವನಾಗಿದ್ದು, ಬಸ್‌ನಲ್ಲಿ ರಾಮೇಶ್ವರಂ ಕೆಫೆಗೆ ಬಂದು ಕೂಪನ್ ಖರೀದಿಸಿ, ರವಾ ಇಡ್ಲಿ ಆರ್ಡರ್ ಮಾಡಿ, ಬ್ಯಾಗ್ ಇಟ್ಟು ಹೊರಟುಹೋಗಿರುವ ಕುರಿತು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ದಾಖಲಾಗಿದೆ. ಈಗಾಗಲೇ ಶೋಧ ಕಾರ್ಯಕ್ಕಾಗಿ ರಾಷ್ಟ್ರೀಯ ತನಿಖಾ ದಳ, ಎನ್,ಎಸ್,ಜಿ, ಸಿ.ಸಿ.ಬಿ ಪೊಲೀಸರು, ಶ್ವಾನದಳ,ಬಾಂಬ್ ಪತ್ತೆ ದಳಗಳು ಸೇರಿ 8 ಪೊಲೀಸ್ ತಂಡಗಳು ತನಿಖೆ ತೀವ್ರಗೊಳಿಸಿದ್ದು, ಈ ಪ್ರಕರಣಕ್ಕೆ ಭಯೋತ್ಪಾದಕ ಸಂಘಟನೆಯ ಲಿಂಕ್ ಇದೆಯೇ ಎನ್ನುವ ಕುರಿತು ತನಿಖೆ ಮುಂದುವರಿದಿದೆ.