ಬೆಂಗಳೂರು : ಪಡಿತರ ವಿತರಕರು ಕಮಿಷನ್ ಹೆಚ್ಚಳ ಮಾಡುವಂತೆ ಕುರಿತ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ಸರ್ಕಾರ ಫಲಾನುಭವಿಗಳಿಗೆ ನೀಡುವ ಒಂದು ಕೆಜಿ ಅಕ್ಕಿಯ ಪಿಡಿಎಸ್ ವಿತರಕರ ಕಮಿಷನ್ ಮೊತ್ತವನ್ನು 1.24 ರೂಪಾಯಿಯಿಂದ 1.50 ರೂಪಾಯಿಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಭಾಗ್ಯ ಯೋಜನೆಯ 10 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿತರಕರ ಬಹುಕಾಲದ ಬೇಡಿಕೆಯಾಗಿರುವ ಈ ಘೋಷಣೆಯನ್ನು ಮಾಡಿದರು. ಬಸವೇಶ್ವರರು ಪ್ರಚಾರ ಮಾಡಿದ ಅನ್ನ ದಾಸೋಹದ ಪರಿಕಲ್ಪನೆಯಿಂದ ಈ ಯೋಜನೆಯು ಪ್ರೇರಿತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹೀಗಾಗಿ ನಾವು ಫಲಾನುಭವಿಗಳಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿಯ ಹಣ ನೀಡುತ್ತಿದ್ದೇವೆ. ನೀವು ಮತ ಹಾಕಿದಾಗ ಬಡವರ ಪರವಾಗಿ ಯಾರು ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು.