Share this news

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ದರ್ಶನ್ ಎ2 ಆಗಿದ್ದಾರೆ. ಈ ಕೇಸ್‌ನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕ ಪವಿತ್ರಾ ಗೌಡ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅವರ ವಿಚಾರಣೆ ನಡೆದಿದ್ದು, ಇಂದು (ಅ.14) ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿದೆ. ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿಲ್ಲ. ಹಾಗಾಗಿ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುವುದು ಅನಿವಾರ್ಯ ಆಗಿದೆ.

ಈಗ ಜಾಮೀನು ಸಿಗದೇ ಇರುವ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಹೈಕೋರ್ಟ್ ಮೊರೆ ಹೋಗಬೇಕಿದೆ. ಇದೇ ಕೇಸ್‌ನ ಇನ್ನೋರ್ವ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರಿಗೂ ಜಾಮೀನು ನಿರಾಕರಣೆ ಮಾಡಲಾಗಿದೆ. ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಅವರಿಗೆ ಬೆನ್ನು ನೋವಿನ ಸಮಸ್ಯೆ ಎದುರಾಗಿದೆ. ಜಾಮೀನು ಅರ್ಜಿ ವಜಾ ಆಗಿದ್ದರಿಂದ ಅವರಿಗೆ ಸಂಕಷ್ಟ ಹೆಚ್ಚಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ಜೂನ್ 11ರಂದು ಅರೆಸ್ಟ್ ಆದರು. ಆ ಬಳಿಕ ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಆದರೆ, ಅಲ್ಲಿ ಅವರು ಐಷಾರಾಮಿ ವ್ಯವಸ್ಥೆ ಪಡೆದ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಈಗ ಈ ತೀರ್ಪಿನಿಂದ ಅವರು ಬಳ್ಳಾರಿ ಜೈಲಲ್ಲೇ ಇರಬೇಕಾಗಿದೆ.

ದರ್ಶನ್ ಪರ ಸಿವಿ ನಾಗೇಶ್ ಅವರು ವಾದ ಮಂಡನೆ ಮಾಡಿದ್ದರು. ದರ್ಶನ್ ವಿರುದ್ಧ ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ ಎಂದು ವಾದ ಮಂಡಿಸಿದ್ದರು. ಇದಕ್ಕೆ ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ಅವರು ಕೌಂಟರ್ ಕೊಟ್ಟಿದ್ದರು. ಪ್ರಸನ್ನ ಕುಮಾರ್ ಅವರ ವಾದ ಜಡ್ಜ್ಗೆ ಹೆಚ್ಚು ಸಮಂಜಸ ಎನಿಸಿದೆ. ಹಾಗಾಗಿ ದರ್ಶನ್‌ಗೆ ಜಾಮೀನು ನಿರಾಕರಿಸಲಾಗಿದೆ. ಇದರಿಂದ ದರ್ಶನ್ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.

ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಗೆ ಎಸ್ ಪಿಪಿ ವಾದಿಸಿ ಎ.13 ಆರೋಪಿ ದೀಪಕ್ ವಿರುದ್ಧ ಕೊಲೆ ಆರೋಪವಿಲ್ಲ. ಅವರಿಗೆ ಜಾಮೀನು ನೀಡಬಹುದು ಎಂಬುದಾಗಿ ವಾದಿಸಿದ್ದರು. ಇಂದು ಕಾಯ್ದಿರಿಸಿದ್ದಂತ ತೀರ್ಪು ಪ್ರಕಟಿಸಿದ್ದು, ಎ.13 ಆರೋಪಿ ದೀಪಕ್ ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

Leave a Reply

Your email address will not be published. Required fields are marked *