
ಕಾರ್ಕಳ,ಏ.01: ಉಡುಪಿ ಜಿಲ್ಲಾ ರೋಟರಿ ಗವರ್ನರ್ ಪಾಲಾಕ್ಷ ಅವರು ಎ 6ರಂದು ಕಾರ್ಕಳ ರೋಟರಿ ಕ್ಲಬ್ ಗೆ ಅಧಿಕೃತ ಭೇಟಿ ನೀಡಲಿದ್ದು, ರೋಟರಿ ಕ್ಲಬ್ ವತಿಯಿಂದ ನೀಡಲ್ಪಟ್ಟ ಹಲವಾರು ಕೊಡುಗೆಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಕೆ.ನವೀನ್ ಚಂದ್ರ ಶೆಟ್ಟಿ ಹೇಳಿದರು.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಾರ್ಕಳ ತಾಲೂಕಿನ 7 ಸರ್ಕಾರಿ ಶಾಲೆಗಳು ಹಾಗೂ 2 ಅಂಗನವಾಡಿಗಳಿಗೆ ಬೆಂಚ್, ಡೆಸ್ಕ್, ಕಪಟು, ಕುಡಿಯುವ ನೀರಿನ ಘಟಕ, ಆಟದ ಪರಿಕರ ಸೇರಿ ಒಟ್ಟು 3.35 ಲಕ್ಷದ ಸಾಮಾಗ್ರಿಗಳ ಹಸ್ತಾಂತರ ಹಾಗೂ 10 ಸಾವಿರ ವೆಚ್ಚದಲ್ಲಿ ಅಳವಡಿಸಲಾದ ಸೂಚನಾ ಫಲಕಗಳನ್ನು ಉದ್ಘಾಟಿಸಲಾಗುತ್ತದೆ ಎಂದು ಕೆ.ನವೀನ್ ಚಂದ್ರ ಶೆಟ್ಟಿ ತಿಳಿಸಿದರು.
ರೋಟರಿ ಕ್ಲಬ್ ವತಿಯಿಂದ ಪ್ರಮುಖವಾಗಿ ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವು, ಬಡವರಿಗೆ ಉಚಿತ ಮನೆಗಳ ನಿರ್ಮಾಣ, ಸೋಲಾರ್ ಅಳವಡಿಕೆ ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಿರಂತವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಕಾರ್ಕಳದಲ್ಲಿ ಬಡರೋಗಿಗಳ ಅನುಕೂಲಕ್ಕಾಗಿ ಗ್ಲೋಬಲ್ ಗ್ರಾಂಟ್ ಮೂಲಕ 90 ಲಕ್ಷ ವೆಚ್ಚದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸುವ ಯೋಜನೆಯ ಕೆಲಸ ಬಹುತೇಕ ಮುಗಿದಿದ್ದು, ಸರ್ಕಾರದ ಅನುಮತಿ ಸಿಗಬೇಕಿದ್ದು, ಮುಂದಿನ ಎರಡು ತಿಂಗಳೊಳಗಾಗಿ ಬ್ಲಡ್ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ ಎಂದು ಕೆ.ನವೀನ್ ಚಂದ್ರ ಶೆಟ್ಟಿ ಹೇಳಿದರು. ಇದರ ಜೊತೆಗೆ ಕಾರ್ಕಳದ ಗಜ್ರಿಯಾ ಆಸ್ಪತ್ರೆಯಲ್ಲಿ 45 ಲಕ್ಷ ವೆಚ್ಚದಲ್ಲಿ ಕಾಟ್ರಾಕ್ಟ್ ಆಪರೇಟಿಂಗ್ ಯೂನಿಟ್ ಆರಂಭಿಸಲಾಗುವುದೆAದರು.
ಇದಲ್ಲದೇ ಮುಂಬರುವ ದಿನಗಳಲ್ಲಿ 5 ಲಕ್ಷ ವೆಚ್ಚದಲ್ಲಿ ರೋಟರಿ ಪಾರ್ಕ್ ಅಭಿವೃದ್ದಿ, ಕಲಂಬಾಡಿ ಪದವು ಶಾಲೆಗೆ 12 ಲಕ್ಷ ವೆಚ್ಚದ ಆಧುನಿಕ ಶೌಚಾಲಯ ಹಾಗೂ 30 ಲಕ್ಷ ವೆಚ್ಚದಲ್ಲಿ ಚತುರ್ಮುಖ ಬಸದಿ ಬಳಿಯ ನಾಗರಬಾವಿ ಕೆರೆ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಾನ್ ಡಿಸಿಲ್ವ, ಇಕ್ಬಾಲ್ ಅಹಮ್ಮದ್, ವಿಜೇಂದ್ರ ಕುಮಾರ್,ವಸಂತ ಸುವರ್ಣ, ಚೇತನ್ ನಾಯಕ್ ಉಪಸ್ಥಿತರಿದ್ದರು.















.
.
.
.
.
.
.
.
.
.
