ಕುಂದಾಪುರ:ಸಹಕಾರ ಭಾರತಿ ಅಭ್ಯಾಸ ವರ್ಗವು ಸಹಕಾರಿ ಸಂಘಗಳ ಹೊಸ ಕಾಯ್ದೆ ಕಾನೂನುಗಳ ಪರಿಜ್ಞಾನವನ್ನು ಮೂಡಿಸಿಕೊಳ್ಳಲು ಮತ್ತು ಸಹಕಾರಿ ಜ್ಞಾನವನ್ನು ಪಸರಿಸಿ ಪರಸ್ಪರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.
ಅವರು ಮಾ 19 ರಂದು ಬಿದ್ಕಲ್ ಕಟ್ಟೆಯ ಶ್ರೀ ನಾಗಲಕ್ಷ್ಮಿ ಸಭಾಭವನದಲ್ಲಿ ನಡೆದ ಕುಂದಾಪುರ ತಾಲೂಕು ಸಹಕಾರ ಭಾರತಿ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ತಾಲೂಕಿನ ಸಹಕಾರ ಭಾರತೀಯ ತಾಲೂಕು ಅಧ್ಯಕ್ಷ ದಿನಪಾಲ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಲೋಕಸಭಾ ಚುನಾವಣೆಯ ನಂತರ ಕುಂದಾಪುರ ತಾಲೂಕಿನಲ್ಲಿ ಸಹಕಾರಿಗಳ ಬೃಹತ್ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಶುದ್ಧತೆ, ಬದ್ಧತೆ ಮತ್ತು ಆಧುನಿಕರಣಕ್ಕಾಗಿ ಸಹಕಾರ ಭಾರತಿ ಕಳೆದ ನಾಲ್ಕೂವರೆ ದಶಕಗಳಿಂದ ದೇಶಾದ್ಯಂತ ಸಂಘಟನಾತ್ಮಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸಕ್ರಿಯ ಕಾರ್ಯ ಚಟುವಟಿಕೆಗಳ ಮೂಲಕ ಎಲ್ಲಾ ಗ್ರಾಮಮಟ್ಟದ ಸಹಕಾರಿ ಸಂಸ್ಥೆಗಳನ್ನು ಮುಟ್ಟುವ ಪ್ರಯತ್ನ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರ ಸಾಣೂರು ನರಸಿಂಹ ಕಾಮತ್ ಮಾತನಾಡಿ,ದೇಶದಲ್ಲಿ ಈಗಾಗಲೇ 8 ಲಕ್ಷ ಸಹಕಾರಿ ಸಂಸ್ಥೆಗಳ ದತ್ತಾಂಶಗಳನ್ನು ಕೇಂದ್ರ ಸರಕಾರವು ಸಹಕಾರಿ ಇಲಾಖೆಯ ಮೂಲಕ ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಏಕರೂಪದ ತಂತ್ರಾಂಶದ ಮೂಲಕ ಸಹಕಾರಿ ಸಂಸ್ಥೆಗಳ ವ್ಯವಹಾರದ ಎಲ್ಲಾ ಅಂಕಿ ಅಂಶಗಳನ್ನು ಕ್ರೂಢೀಕರಿಸಿ ಸಹಕಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತರಲಿದೆ ಎಂದರು.
ಇದೀಗ ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ಏಕಗಂಟಿನಲ್ಲಿ ಬಿಡುಗಡೆ ಮಾಡಲು, ಪಶು ಆಹಾರಕ್ಕೆ ಪ್ರತಿ ಕೆಜಿಗೆ 5 ರೂಪಾಯಿ ಸಬ್ಸಿಡಿ ಮತ್ತು ಪ್ರೋತ್ಸಾಹ ಧನವನ್ನು ಈಗಿರುವ ಐದು ರೂಪಾಯಿಯಿಂದ 10 ರೂಪಾಯಿಗೆ ಏರಿಸಲು ಹಾಗೂ 2019 ರ ಜಾನುವಾರು ಗಣತಿಯ ಪ್ರಕಾರ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳನ್ನುಮುಚ್ಚಲು ಹೊರಟಿರುವ ಸರಕಾರದ ನಿರ್ಧಾರದ ವಿರುದ್ಧ ರಾಜ್ಯ ವ್ಯಾಪಿ ಹೋರಾಟವನ್ನು ಸಂಘಟಿಸಲಾಗುವುದು ಎಂದರು.
ಸಮಾರೋಪ ಸಮಾರಂಭ ಸಹಕಾರ ಭಾರತಿ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕರು ಹಾಗೂ ಖ್ಯಾತ ವಕೀಲ ಮಂಜುನಾಥ ಎಸ್ಕೆ ಮಾತನಾಡಿ, ರಾಜ್ಯ ಸರಕಾರವು ಸಹಕಾರಿ ಕಾಯ್ದೆಯಲ್ಲಿ ತಂದಿರುವ ನೂತನ ತಿದ್ದುಪಡಿಗಳ ಬಗ್ಗೆ ಮಾಹಿತಿ ನೀಡಿದರು.
ಬಿದ್ಕಲ್ ಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮೋಹನ್ ದಾಸ ಶೆಟ್ಟಿ ಸ್ವಾಗತಿಸಿ ,ಸಹಕಾರ ಭಾರತಿ ಕುಂದಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ದಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು