ಕಲಬುರಗಿ: ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಯಶಸ್ವಿಯಾಗಲಿದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಅವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ರಾಜಕೀಯ ವಿರೋಧಿಗಳು ಇಂಡಿಯಾ ಮೈತ್ರಿಕೂಟದ ಬಗ್ಗೆ ಏನು ಬೇಕಾದರೂ ಹೇಳಬಹುದು,ಆದರೆ ನಾವು ಆಶಾವಾದಿಗಳಾಗಿದ್ದೇವೆ ಎಂದರು.
ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷದೊಂದಿಗೆ ಕಾಂಗ್ರೆಸ್ ಪಕ್ಷವು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಇದರೊಂದಿಗೆ ಜಾರ್ಖಂಡ್ ಮುಕ್ತಿ ಮೋರ್ಚಾ, ಆರ್‌ಜೆಡಿ, ಡಿಎಂಕೆ ಮತ್ತು ಮುಸ್ಲಿಂ ಲೀಗ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು ಇನ್ನಷ್ಟೇ ಪ್ರಕಟವಾಗಬೇಕಿದೆ ಎಂದರು. ಕಠಿಣ ಹೋರಾಟವನ್ನು ನೀಡಲು ನಾವು ಕೊನೆಯ ಕ್ಷಣದವರೆಗೂ ಮೈತ್ರಿಕೂಟದ ಎಲ್ಲಾ ಪಾಲುದಾರ ಪಕ್ಷಗಳೊಂದಿಗೆ ಚರ್ಚೆ ನಡೆಸುತ್ತೇವೆ. ಸರ್ವಾಧಿಕಾರದತ್ತ ಸಾಗುತ್ತಿರುವ ಎನ್‌ಡಿಎ ಒಕ್ಕೂಟಕ್ಕೆ ದೇಶದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.