ಕಾರ್ಕಳ:ಉದಯವಾಣಿ ಪತ್ರಿಕೆಯ ಮಂಗಳೂರು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ವಿಶ್ರಾಂತ ಪತ್ರಕರ್ತ ಮನೋಹರ ಪ್ರಸಾದ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಕರ್ವಾಲಿನವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪಡೆದು ಬಳಿಕ ನವ ಭಾರತ ಪತ್ರಿಕೆಯಲ್ಲಿ ಮಾಧ್ಯಮ ವೃತ್ತಿ ಜೀವನ ಆರಂಭಿಸಿದ್ದರು.
ಬಳಿಕ ಉದಯವಾಣಿ ದಿನಪತ್ರಿಕೆಯ ಮಂಗಳೂರು ವರದಿಗಾರರಾಗಿ ಕೆಲಸ ಆರಂಭಿಸಿ, ಅಲ್ಲಿಂದ ಹಿರಿಯ ವರದಿಗಾರರಾಗಿ ತದನಂತರ ಬ್ಯೂರೋ ಚೀಫ್ ಆಗಿ ತನ್ನದೇ ಛಾಪು ಮೂಡಿಸಿದ್ದರು. ಉದಯವಾಣಿಯಲ್ಲಿ 36 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದ ಮನೋಹರ ಪ್ರಸಾದ್ ಕಳೆದ 3 ವರ್ಷಗಳ ಹಿಂದಷ್ಟೇ ಸೇವೆಯಿಂದ ನಿವೃತ್ತರಾಗಿದ್ದರು.
ಕೇವಲ ಪತ್ರಿಕಾರಂಗ ಮಾತ್ರವಲ್ಲದೇ ಸಾಹಿತ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದು, ಬೈಲೂರಿನಲ್ಲಿ ನಡೆದ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.