
ಕಾರ್ಕಳ, ನ.06:ಕಾಡುಹೊಳೆ ಹಾಲಿನ ಡೈರಿನ ಸಮೀಪದ ಇಳಿಜಾರು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಪಿಕಪ್ ಚಾಲಕ ಮುಂದಿನಿಂದ ಹೋಗುತ್ತಿದ್ದ ಬೈಕನ್ನು ಓವರ್’ಟೇಕ್ ಮಾಡಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಕಾರಿನ ಡಿಕ್ಕಿಯಾದ ಪಿಕಪ್ ಬಳಿಕ ಬೈಕಿಗೆ ಬಡಿದು ಬೈಕ್ ಸವಾರ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.
ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ಪಿಕಪ್ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಕಾಡುಹೊಳೆ ಹಾಲು ಡೈರಿಯ ಬಳಿಯ ಏರು ರಸ್ತೆಯ ಬಳಿ ಬರುತ್ತಿದ್ದಾಗ ಮುಂದಿನಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಬೈಕನ್ನು ಅಪಾಯಕಾರಿ ರೀತಿಯಲ್ಲಿ ಓವರ್’ಟೇಕ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ.ಈ ಅಪಘಾತದಿಂದ ಬೈಕಿಗೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ.
ಎರಡೂ ಬದಿ ರಸ್ತೆ ಇಳಿಜಾರಾಗಿರುವ ಹಿನ್ನೆಲೆಯಲ್ಲಿ ವಾಹನಗಳು ಪರಸ್ಪರ ಕಾಣಿಸುವುದಿಲ್ಲ. ಆದರೆ ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮ ಪಾಲಿಸದೇ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿರುವ ಕಾರಣದಿಂದಾಗಿ ಈ ಸ್ಥಳದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಈ ಭಾಗದ ರಸ್ತೆಯ ಉಬ್ಬನ್ನು ತೆರವುಗೊಳಿಸಿದರೆ ಎರಡೂ ಕಡೆಯಿಂದ ಬರುವ ವಾಹನಗಳು ಗೋಚರಿಸುವುದರಿಂದ ಅಪಘಾತ ತಡೆಗಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದ ಲೋಕೋಪಯೋಗಿ ಇಲಾಖೆ ತಕ್ಷಣವೇ ಕ್ರಮಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.

