ಕೊಲAಬೋ:ತೀವೃ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಮೇಲಕ್ಕೆತ್ತಲು ಇನ್ನಿಲ್ಲದ ಯತ್ನ ನಡೆಸುತ್ತಿದೆ. ಈ ನಡುವೆ ತನ್ನ ಸರ್ಕಾರಿ ಉದ್ಯಮಗಳಿಂದ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಕಾರ್ಯತಂತ್ರಕ್ಕೆ ಮುಂದಾಗಿದ್ದು, ಚೀನಾ ನಿರ್ಮಿಸಿದ 209 ಮಿಲಿಯನ್ ಡಾಲರ್ ಮೌಲ್ಯದ ಮಟಾಲಾ ರಾಜಪಕ್ಸೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಎರಡು ಭಾರತೀಯ ಮತ್ತು ರಷ್ಯಾದ ಕಂಪನಿಗಳಿಗೆ ಹಸ್ತಾಂತರಿಸಿದೆ.
ಶುಕ್ರವಾರ ನಡೆದ ಸರ್ಕಾರದ ಕ್ಯಾಬಿನೆಟ್ ಹೇಳಿಕೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2013 ರಲ್ಲಿ ಉದ್ಘಾಟಿಸಲ್ಪಟ್ಟ ಮತ್ತು ಚೀನಾ ಎಕ್ಸಿಮ್ ಬ್ಯಾಂಕ್ ಧನಸಹಾಯ ಪಡೆದ ಮಟ್ಟಲಾ ರಾಜಪಕ್ಸೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕಡಿಮೆ ವಿಮಾನ ಸಂಖ್ಯೆ, ಪರಿಸರ ಸೂಕ್ಷ್ಮ ಸ್ಥಳ ಮತ್ತು ನಡೆಯುತ್ತಿರುವ ಆರ್ಥಿಕ ನಷ್ಟದಿಂದಾಗಿ ವಿವಾದದ ಮೂಲವಾಗಿದೆ.
ಕ್ಯಾಬಿನೆಟ್ ಹೇಳಿಕೆಯ ಪ್ರಕಾರ, ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತದಿಂದ ಶೌರ್ಯ ಏರೋನಾಟಿಕ್ಸ್ (ಪ್ರೈವೇಟ್) ಲಿಮಿಟೆಡ್ ಮತ್ತು ರಷ್ಯಾದಿಂದ ಏರ್ಪೋರ್ಟ್ಸ್ ಆಫ್ ರೀಜನ್ಸ್ ಮ್ಯಾನೇಜ್ಮೆಂಟ್ ಕಂಪನಿಗೆ 30 ವರ್ಷಗಳ ಅವಧಿಗೆ ವರ್ಗಾಯಿಸಲಾಗುವುದು ಎಂದು ಸುದ್ದಿ ಸಂಸ್ಥೆಯೊAದು ವರದಿ ಮಾಡಿದೆ. ಆದರೆ ಒಪ್ಪಂದದ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಸರ್ಕಾರದಲ್ಲಿದ್ದಾಗ ಮಟಾಲಾ ರಾಜಪಕ್ಸೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ವಿವಿಧ ಮೂಲಸೌಕರ್ಯ ಯೋಜನೆಗಳಿಗಾಗಿ ಎರವಲು ಪಡೆದ 4.2 ಬಿಲಿಯನ್ ಡಾಲರ್ ಮೊತ್ತದ ಭಾಗವಾಗಿರುವ ವಿಮಾನ ನಿಲ್ದಾಣ ಸಾಲವನ್ನು ಪುನರ್ರಚಿಸುವ ಬಗ್ಗೆ ಶ್ರೀಲಂಕಾ ಪ್ರಸ್ತುತ ಚೀನಾ ಎಕ್ಸಿಮ್ ಬ್ಯಾಂಕ್ ಜತೆಗೆ ಚರ್ಚಿಸುತ್ತಿದೆ.