ಬೆಂಗಳೂರು: ನೀವು ಮಾಡಿದ ತಪ್ಪಿಗೆ ಪೊಲೀಸರು ನಿಮಗೆ ಭದ್ರತೆ ಕೊಡಬೇಕೇ ಎಂದು ಕರ್ನಾಟಕ ಹೈಕೋರ್ಟ್ ತಮಿಳು ನಟ ಕಮಲ್ ಹಾಸನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕರ್ನಾಟಕದಲ್ಲಿ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅವಕಾಶ ನಿರಾಕರಿಸಿದ ಹಿನ್ನಲೆಯಲ್ಲಿ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಅನುಮತಿ ಕೋರಿ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ಆರಂಭಿಸಿದ ನ್ಯಾ. ಎಂ. ನಾಗಪ್ರಸನ್ನ ಅವರು, ಕನ್ನಡದ ಬಗ್ಗೆ ತಪ್ಪು ಹೇಳಿಕೆ ನೀಡಿ ಆ ಬಳಿಕ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಹಾಸನ್ ವಾದ ಮಾಡಿದ್ದು, ನೀವು ಮಾಡಿದ ತಪ್ಪಿಗೆ ಪೊಲೀಸರು ಭದ್ರತೆ ಯಾಕೆ ಕೊಡಬೇಕೆಂದು ಕಮಲ್ ಹಾಸನ್ ವಕೀಲಧ್ಯಾನ್ ಚಿನ್ನಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಪ್ರಕರಣದಲ್ಲಿ ಕನ್ನಡಿಗರ ಕ್ಷಮೆ ಕೇಳಲು ಯಾಕೆ ಸಾಧ್ಯವಿಲ್ಲ, ಈ ವಿವಾದದ ಕುರಿತು ಕ್ಷಮೆ ಯಾಚಿಸಲು ಮಧ್ಯಾಹ್ಹ 2.30ರವರೆಗೆ ಕಮಲ್ ಹಾಸನ್ ವಕೀಲರಿಗೆ ಗಡುವು ನೀಡಿದ್ದು,ತಮ್ಮ ನಿಲುವು ತಿಳಿಸುವಂತೆ ಕೋರ್ಟ್ ಸೂಚಿಸಿದೆ.
‘ನಿಮ್ಮ ಹೇಳಿಕೆಯಿಂದ ಶಿವರಾಜಕುಮಾರ್ ಸಮಸ್ಯೆ ಅನುಭವಿಸುವಂತಾಗಿದೆ. ನೀವು ನಿಮ್ಮ ಹೇಳಿಕೆಯನ್ನು ನಿರಾಕರಿಸಿಲ್ಲ, ಒಪ್ಪಿಕೊಂಡಿದ್ದೀರಾ. ಆದರೆ ಕ್ಷಮೆಯಾಚನೆ ಮಾಡಲು ಸಿದ್ಧರಿಲ್ಲ. ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಬಿಡುಗಡೆ ಬಯಸುತ್ತಿದ್ದೀರಾ? 300 ಕೋಟಿ ರೂಪಾಯಿಯ ಸಿನಿಮಾ ಎನ್ನುತ್ತಿದ್ದೀರಾ, ಕ್ಷಮೆಯಾಚನೆ ಮಾಡಿ. ಆಗ ಸಮಸ್ಯೆಯೇ ಇರುವುದಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅರ್ಜಿಯ ಮುಂದುವರಿದ ವಿಚಾರಣೆಯು ಮಧ್ಯಾಹ್ನ 2.30 ರಿಂದ ಆರಂಭವಾಗಿದೆ.