ಕ್ಯಾಲಿಪೋರ್ನಿಯ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬಂದಿಳಿದಿದ್ದಾರೆ. ಶುಭಾಂಶು ಶುಕ್ಲಾ 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಇದೀಗ ಹಿಂದಿರುಗಿದ್ದು, ಎಲ್ಲೆಡೆ ಸಂತಸ ಮನೆ ಮಾಡಿದೆ. ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಮಾಡಿದೆ.
ಗಗನಯಾನಿ ಶುಭಾಂಶು ಶುಕ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಮೂಲಕ ಅವರು ಈ ಸಾಧನೆ ಮಾಡಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಭಾಂಶು ಶುಕ್ಲಾ ಅವರ ಸಮರ್ಪಣಾ ಮನೋಭಾವ ಭಾರತದ ಶತಕೋಟಿ ಕನಸುಗಳಿಗೆ ಸ್ಫೂರ್ತಿ ನೀಡಿದೆ. ಆಕ್ಸಿಯಮ್ -4ರ ಭಾಗವಾಗಿ ಶುಭಾಂಶು ಶುಕ್ಲಾ ಅವರ ಪ್ರಯಾಣವು ಭಾರತದ “ಮಾನವ ಬಾಹ್ಯಾಕಾಶ ಹಾರಾಟ ಮಿಷನ್, ಗಗನಯಾನ”ವನ್ನು ಸಾಧಿಸುವಲ್ಲಿ ಒಂದು ಮೈಲಿಗಲ್ಲು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜೂ.25ರಂದು ಆಕ್ಸಿಯಂ-4 ಮಿಷನ್ ಮೂಲಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅಮೆರಿಕ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು ಹಾಗೂ ಪೋಲೆಂಡ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ ಅಂತರಿಕ್ಷ ಯಾನಕ್ಕೆ ತೆರಳಿದ್ದರು. 8 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಜೂನ್ 26 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್ ಮಾಡಿತು. ಆದಾಗ್ಯೂ, ಈ ಮಿಷನ್ 14 ದಿನಗಳದ್ದಾಗಿತ್ತು. ಈಗ ಗಗನಯಾತ್ರಿಗಳ ಮರಳುವಿಕೆ ನಾಲ್ಕು ದಿನಗಳ ವಿಳಂಬವಾಗಿದೆ. ಜುಲೈ 6 ರಂದು, ಶುಭಾಂಶು ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಸಂಸ್ಥೆ ಇಸ್ರೋ ನಡುವಿನ ಒಪ್ಪಂದದಡಿಯಲ್ಲಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು. 41 ವರ್ಷಗಳ ಹಿಂದೆ, ಭಾರತದ ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ನೌಕೆಯಲ್ಲಿ ,ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.